Back
Home » ಆರೋಗ್ಯ
ಕೆಲಸದಲ್ಲಿ ಕಿರಿಕಿರಿ ಎನಿಸುವ ಈ ಸಂಕೇತಗಳೇ ಮಾನಸಿಕ ಆರೋಗ್ಯಕ್ಕೆ ಕುತ್ತು !
Boldsky | 18th Mar, 2020 10:33 AM
 • 1. ಕೆಲಸದ ಸಮಯದಲ್ಲಿ ಸಕಾರಾತ್ಮಕ ಭಾವನೆಗಳು ಬರುವುದಿಲ್ಲ

  ಹೇಳುವವನಿಗಿಂತ ಮಾಡುವವನೇ ಲೇಸು ಎಂಬಂತೆ ದುಡಿಯುವವನಿಗೆ ತಾನೇ ಗೊತ್ತು ಅದರ ಕಷ್ಟ ಏನು ಎಂದು. ಕೆಲಸದ ಸಮಯ ಎಂದರೆ ಬಿಡುವಿಲ್ಲದ ಸಮಯ ಎಂದೇ ಅರ್ಥ. ಮೇಲಿನವರ ಒತ್ತಡ, ಇನ್ನೂ ಕೆಲಸ ಮುಗಿದಿಲ್ಲ ಎಂಬ ಮಾನಸಿಕ ಭಾವನೆ. ಜೊತೆಗೆ ಅದು ಇದು ಎನ್ನುವ ಮನೆಯ ಜವಾಬ್ದಾರಿ ಕೆಲಸಗಳು ಹೀಗೆ ಎಲ್ಲಾ ಮನಸ್ಸಿಗೆ ಬಂದು ಕೆಲಸದ ಸಮಯದಲ್ಲಿ ಸರಿಯಾದ ಖುಷಿಯನ್ನು ಅನುಭವಿಸುವುದಕ್ಕೆ ಆಗುವುದೇ ಇಲ್ಲ. ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದ ಪಕ್ಷದಲ್ಲಿ ಮೇಲಿನವರಿಂದ ಎಲ್ಲಿ ಮಾತು ಕೇಳಬೇಕಾಗುವುದೋ ಎಂಬ ಭಯ ಬೇರೆ. ಅಕ್ಕ ಪಕ್ಕ ಕೆಲಸ ಮಾಡುವವರು ಬಂದು ಖುಷಿಯಾಗಿರುವಂತೆ ಹುರಿದುಂಬಿಸಿದರೂ ಕೇವಲ ಮುಗುಳ್ನಕ್ಕು ಸುಮ್ಮನಾಗಬೇಕಷ್ಟೆ.


 • 2. ಒಂದು ವಾರ ಕೆಲಸ ಮಾಡಿದ ಸುಸ್ತನ್ನು ಕಳೆದುಕೊಳ್ಳಲು ಒಂದು ವೀಕೆಂಡ್ ಸಂಪೂರ್ಣವಾಗಿ ಬೇಕೇ ಬೇಕು ನೋಡಿ

  ಕೆಲವರಿಗೆ ವಾರದಲ್ಲಿ ಐದು ದಿನ ಕೆಲಸದ ದಿನವಾಗಿದ್ದರೆ, ಇನ್ನು ಕೆಲವರಿಗೆ ಭಾನುವಾರ ಬಿಟ್ಟು ಉಳಿದ ಆರು ದಿನ ಕೆಲಸದ ದಿನಗಳೇ ಆಗಿರುತ್ತವೆ. ಸಿಗುವುದೇ ಒಂದು ದಿನ ರಜೆ. ಅದರಲ್ಲಿ ಆ ಕೆಲಸ ಈ ಕೆಲಸ ಎಂದು ಮನೆಗೆ ಸಂಬಂಧ ಪಟ್ಟ ಕೆಲಸಗಳೇ ಸರಿ ಹೋಗುತ್ತವೆ.

  ಇನ್ನು ರೆಸ್ಟ್ ತೆಗೆದುಕೊಳ್ಳುವುದು ಯಾವಾಗ? ಹಾಗೋ ಹೀಗೋ ಮಾಡಿ ಈ ವಾರದ ಕೆಲಸಗಳನ್ನು ಮುಂದಿನ ವಾರ ಮಾಡೋಣ ಎಂದು ಪೋಸ್ಟ್ಪೋನ್ ಮಾಡಿಕೊಂಡರೆ ಇಡೀ ವಾರ ಕಷ್ಟ ಪಟ್ಟು ಕೆಲಸ ಮಾಡಿದ ಸಂದರ್ಭಗಳು ನೆನಪಿಗೆ ಬಂದು ಕಷ್ಟ ಪಟ್ಟು ಕೆಲಸ ಮಾಡಿದ ಸುಸ್ತು ನಿವಾರಿಸಿಕೊಳ್ಳಲೆಂದೇ ಬೇಕಾಗುತ್ತದೆ. ಆದರೂ ನಮ್ಮ ಮಾನಸಿಕ ಸ್ಟೈರ್ಯವನ್ನು ಕಳೆದುಕೊಳ್ಳದೇ ಮತ್ತೆ ಮಾರನೇ ದಿನ ಕೆಲಸಕ್ಕಾಗಿ ನಮ್ಮನ್ನು ಹುಡುಕಿಕೊಂಡು ಬರುವ ಸೋಮವಾರವನ್ನು ಆದರದಿಂದ ಸ್ವಾಗತಿಸಿ ಊಟದ ಡಬ್ಬಿ ತೆಗೆದುಕೊಂಡು ಕೆಲಸಕ್ಕೆ ಓಡಬೇಕು.


 • 3. ಭಾನುವಾರ ರಾತ್ರಿ ಬಂತೆಂದರೆ ಬರೀ ಒತ್ತಡ ಮತ್ತು ಮಹಾನ್ ಕಿರಿಕಿರಿ

  ಇದು ಸಹಜವಾಗಿ ಎಲ್ಲರಿಗೂ ಎದುರಾಗುವ ಅನುಭವ. ಸೋಮವಾರದಿಂದ ಹಾಗೋ ಹೀಗೋ ಒಲ್ಲದ ನಮ್ಮ ಮನಸ್ಸನ್ನು ಕೆಲಸದ ಕಡೆಗೆ ತಿರುಗಿಸಿ ಶುಕ್ರವಾರ ಮತ್ತು ಶನಿವಾರದವರೆಗೆ ಕಷ್ಟ ಪಟ್ಟು ದುಡಿದು ಭಾನುವಾರ ಬಂತೆಂದರೆ ಖುಷಿಯಾಗಿರೋಣ, ಹೊರಗಡೆ ಎಲ್ಲಿಯಾದರೂ ಹೋಗಿ ಬರೋಣ ಎಂಬ ಕೆಲವಷ್ಟು ಯೋಜನೆಗಳ ಸರಮಾಲೆಯೊಂದಿಗೆ ಶನಿವಾರ ರಾತ್ರಿ ಕನಸು ಕಾಣುತ್ತೇವೆ.

  ಆದರೆ ಸಿಗುವುದು ಕೇವಲ ಭಾನುವಾರ ಒಂದೇ ದಿನ ರಜೆ ಅಲ್ಲವೇ? ಹಾಗಾಗಿ ಅಲ್ಲಿ ಇಲ್ಲಿ ದೂರದ ಸ್ಥಳಗಳಿಗೆ ಹೋಗುವ ಮನಸನ್ನು ಬಿಟ್ಟು ಹತ್ತಿರದಲ್ಲೇ ಎಲ್ಲಿಯಾದರೂ ಹೋಗಿ ಸುತ್ತಾಡಿಕೊಂಡು ಸಂಜೆಯಾಗುತ್ತಲೇ ಮನೆಗೆ ಹಿಂದಿರುಗುತ್ತೇವೆ. ಹಿಂದಿರುಗಿದ ತಕ್ಷಣ ಸೋಮವಾರದ ಕೆಲಸದ ಪಟ್ಟಿ ನಮ್ಮ ಮೆದುಳಿನಲ್ಲಿ ಅದಾಗಲೇ ಸಿದ್ಧವಾಗಿ ಸೋಮಾರಿಯಾಗದಂತೆ ನಮ್ಮನ್ನು ಬಡಿದೆಬ್ಬಿಸುತ್ತದೆ. ಆಗ ಖಂಡಿತ ಮನಸ್ಸಿಗೆ ಒಂದು ರೀತಿಯ ಹಿಂಸೆ ಮತ್ತು ಕಿರಿಕಿರಿ ಎದುರಾಗಿ ಮನೆಯವರ ಮೇಲೆ ರೇಗಾಡಲು ಶುರು ಮಾಡುತ್ತೇವೆ. ಕೆಲಸದ ಒತ್ತಡ ನಮಗೆ, ಬೆಳಗ್ಗಿನಿಂದ ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಹೀಗೇಕೆ ಎಂಬ ಚಿಂತೆ ಅವರಿಗೆ.......


 • 4. ಹತ್ತಾರು ವರ್ಷಗಳ ದೂರದಲ್ಲಿರುವ ನಿವೃತ್ತಿಯ ಬಗ್ಗೆ ಈಗಲೇ ಅದೊಂದು ಸಣ್ಣ ಯೋಚನೆ

  ಪ್ರತಿ ದಿನ ಎದುರಾಗುವ ಕೆಲಸದ ಒತ್ತಡ, ಮೇಲಿನವರ ಕಿರಿಕಿರಿ, ಸಹೋದ್ಯೋಗಿಗಳ ಕಾಟ ಕೆಲವೊಮ್ಮೆ ಕೆಲಸ ಮಾಡುವವರಿಗೆ ಈ ರೀತಿಯ ಒಂದು ಸಣ್ಣ ಆಲೋಚನೆ ಮನಸ್ಸಿಗೆ ಆಗಾಗ ಕಾಡುವಂತೆ ಮಾಡಿ ಬಿಡುತ್ತದೆ. ವೀಕೆಂಡ್ ಯಾವಾಗ ಬರುತ್ತದೆ ಎಂದು ಆಲೋಚಿಸುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಈ ಕೆಲಸದಿಂದಲೇ ಯಾವಾಗ ಮುಕ್ತಿ ಸಿಗುತ್ತದೆ ಎಂಬ ಆಲೋಚನೆ ಬರಲು ಶುರುವಾಗುತ್ತದೆ.

  ಒಂದು ವೇಳೆ ಈಗಲೇ ಕೆಲಸ ಬಿಟ್ಟರೆ ಮುಂದಿನ ದುಡಿಮೆ ಹೇಗೆ? ಸಂಪಾದನೆ ಮಾಡಿ ಸಂಸಾರ ತೂಗಿಸಲು ಮತ್ತು ಇತರರಂತೆ ನಾವು ಕೂಡ ಶ್ರೀಮಂತರಾಗಲು ಬೇರೆ ದಾರಿಗಳು ಯಾವೆಲ್ಲಾ ಇವೆ? ಎಂಬ ಆಲೋಚನೆಗಳೂ ಸಹ ಮನಸ್ಸಿಗೆ ಬಂದು ತಟ್ಟುತ್ತಿರುತ್ತವೆ. ಮುಂದಿನ ದಾರಿ ನಿರ್ದಿಷ್ಟವಾಗಿ ಕಂಡವರು ಮತ್ತು ಅದಕ್ಕೆ ಬೇಕಾದ ಅನುಕೂಲತೆ ಅದಾಗಲೇ ಪಡೆದವರು ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿ ಮನೆಯ ದಾರಿ ಹಿಡಿಯುತ್ತಾರೆ. ಹರ್ಷದ ಕೂಳು ನೋಡಿ ವರ್ಷದ ಕೂಳು ಕಳೆದುಕೊಂಡಂತೆ ಆಗಬಾರದು ಎನ್ನುವವರು ಎಲ್ಲವನ್ನೂ ಸಹಿಸಿಕೊಂಡು ಕೆಲಸಕ್ಕೆ ಮರಳುತ್ತಾರೆ.


 • 5. ಕೆಲಸದ ದಿನಗಳಲ್ಲಿ ನಿದ್ರೆ ಬಾರದು ನಿಜ

  ವಾರದ ಐದು ಅಥವಾ ಆರು ದಿನಗಳ ಕೆಲಸದ ನಂತರ ಸುಸ್ತಾಗಿ ಮನೆಗೆ ಬಂದು ಒಂದು ಅರ್ಧ ಗಂಟೆ ವಿಶ್ರಾಂತಿ ತೆಗೆದುಕೊಳ್ಳೋಣ ಎಂಬ ಆಲೋಚನೆ ಬರುವುದು ಎಲ್ಲರಿಗೂ ಸಹಜ. ಆದರೆ ಅವರು ಅಂದುಕೊಂಡಂತೆ ಆ ಅರ್ಧ ಗಂಟೆ ಸಮಯ ಸಿಕ್ಕರೆ ಅದೇ ಅವರಿಗೆ ಗೋಲ್ಡನ್ ಟೈಮ್ ಎಂದು ಹೇಳಬಹುದು.

  ಏಕೆಂದರೆ ಆನಂತರ ಊಟ ಮಾಡಿ ನೆಮ್ಮದಿಯಾಗಿ ಮಲಗುತ್ತೇನೆ ಎಂದುಕೊಂಡರೂ ಅದು ಕೇವಲ ಕನಸಾಗಿ ಮಾತ್ರ ಉಳಿಯುತ್ತದೆ. ಮನೆಯ ಹಲವು ತಾಪತ್ರಯಗಳ ವಿಚಾರಗಳು ಜೊತೆಗೆ ನಾಳಿನ ಕೆಲಸದ ಯೋಚನೆ ನಿದ್ರೆ ಹತ್ತಲು ಬಿಡುವುದಿಲ್ಲ. ಹೀಗಾಗಿ ಕೊನೆಗೆ ಬೇಸತ್ತು ನಿದ್ರೆ ಮಾಡಲೆಂದೇ ಕೆಲವು ದಿನ ರಜೆ ಹಾಕಬೇಕು ಎಂಬ ಆಲೋಚನೆ ಮನಸ್ಸಿಗೆ ಬರುತ್ತದೆ.


 • 6. ಆಗಾಗ ಹುಷಾರು ತಪ್ಪುವುದು ಗ್ಯಾರಂಟಿ

  ಮನುಷ್ಯನ ಒಂದು ಹುಟ್ಟು ಗುಣ ಎಂದರೆ ತನ್ನ ಮನಸ್ಸಿಗೆ ಸರಿ ಎನಿಸಿದ ಕೆಲಸ ಎಷ್ಟೇ ಕಷ್ಟವಾದರೂ ಸರಿ ಅದನ್ನು ಇಷ್ಟ ಪಟ್ಟು ಮಾಡುತ್ತಾನೆ. ಹಾಗಿರುವನು ಸುಮ್ಮನೆ ಕೂತು ಕೆಲಸ ಮಾಡದೆಯೇ ಹೇಗಾದರೂ ಹಣ ಗಳಿಸಬೇಕು ಮತ್ತು ಶ್ರೀಮಂತನಾಗಬೇಕು ಎಂಬ ಯೋಚನೆ ಮಾಡುತ್ತಾನೆ.

  ಓದುವ ವಿಷಯದಲ್ಲಿ ಮಕ್ಕಳು ಹಾಗೂ ಕೆಲಸದ ವಿಷಯದಲ್ಲಿ ದೊಡ್ಡವರು ಸೋಮಾರಿತನ ತೋರಿಸುವುದು ಸಹಜವೇ ಬಿಡಿ. ಆದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡು ಕೆಲಸದ ಕಡೆಗೆ ಗಮನ ವಹಿಸುವ ಪರಿಸ್ಥಿತಿ ಇರುತ್ತದೆ. ಅದಕ್ಕೆ ಕಾರಣ ಅವರನ್ನೇ ನಂಬಿರುವ ಅವರ ಕುಟುಂಬ. ಇದು ಅವರ ಮಾನಸಿಕ ಹಾಗೂ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಒತ್ತಡ ಉಂಟು ಮಾಡಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ದೈಹಿಕ ಆರೋಗ್ಯ ಹದಗೆಡುತ್ತದೆ.


 • 7. ಸಾಕಷ್ಟು ರಜೆ ತೆಗೆದುಕೊಳ್ಳಲು ಬಯಸುತ್ತೀರಿ

  ಕೆಲವೊಮ್ಮೆ ನಿಮ್ಮ ಮನಸ್ಸಿಗೆ ಎದುರಾಗುವ ಮಾನಸಿಕ ಒತ್ತಡ ನಿಮ್ಮನ್ನು ಕೆಲಸದ ಸ್ಥಳದಿಂದ ಸ್ವಲ್ಪ ದೂರವೇ ಉಳಿಯುವಂತೆ ಮಾಡುತ್ತದೆ. ಮನಸ್ಸಿಗೆ ಒಮ್ಮೆ ಇಂತಹ ಭಾವನೆ ಬರಲು ಶುರುವಾದ ದಿನದಿಂದ ಆಗಾಗ ನಿಮ್ಮ ಮೇಲಿನವರಿಗೆ ನಿಮ್ಮಿಂದ ರಜೆಯ ಅರ್ಜಿಗಳು ಹೋಗಲು ಪ್ರಾರಂಭವಾಗುತ್ತವೆ. ಕೆಲವು ಬಾರಿಯಂತೂ ಕೇವಲ ಸಣ್ಣ ಪುಟ್ಟ ಕಾರಣಗಳಿಗೆ ರಜೆ ಬೇಕೆಂದು ಗೋಗರೆಯುತ್ತೀರಿ.

  ಅವರು ಬೇಸರ ಮಾಡಿಕೊಂಡಾದರೂ ಸರಿ ನಿಮಗೆ ರಜೆ ಕೊಟ್ಟರೆ ಪರವಾಗಿಲ್ಲ. ಇಲ್ಲದಿದ್ದರೆ ನಾನಂತೂ ಕೆಲಸಕ್ಕೆ ಅಲ್ಲಿಗೆ ಬರುವುದಿಲ್ಲ. ಮನೆಯಿಂದಲೇ ಕೆಲಸ ಮಾಡಲು ಬಯಸುತ್ತೇನೆ ಎಂಬ ಪರ್ಯಾಯ ವಾದ ಮಂಡಿಸುತ್ತೀರಿ. ಇದು ಹೀಗೇ ಮುಂದುವರೆದರೆ ಖಂಡಿತ ಇದೇ ಭಾವನೆ ಕೊನೆಗೆ ನಿಮ್ಮನ್ನು ನೀವು ಕೆಲಸ ಮಾಡುವ ಸ್ಥಳದಿಂದ ದೂರ ಮಾಡುತ್ತದೆ.


 • 8. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವೊಬ್ಬರು ನಿಮಗೆ ಕಹಿಯಾಗಿರುತ್ತಾರೆ

  ಸಾಮಾನ್ಯವಾಗಿ ನಾವು ಕೆಲಸ ಮಾಡುವ ಯಾವುದೇ ಸ್ಥಳದಲ್ಲಿ ನಮ್ಮ ಜೊತೆಯಲ್ಲಿ ಕೆಲಸ ಮಾಡುವವರ ಜೊತೆ ಅನ್ಯೂನ್ಯವಾಗಿ ಕೆಲಸ ಮಾಡಬೇಕಾದುದು ನಮ್ಮ ಧರ್ಮ. ನಮ್ಮ ಕೈಯಲ್ಲಿನ ನಮ್ಮ ಐದು ಬೆರಳುಗಳೇ ಸಮನಾಗಿರುವುದಿಲ್ಲ. ಅಂದ ಮೇಲೆ ನಮ್ಮ ಸಹೋದ್ಯೋಗಿಗಳೂ ಎಲ್ಲರೂ ಒಂದೇ ರೀತಿ ಇರುವುದಿಲ್ಲ ಅಲ್ಲವೇ? ಈ ಸತ್ಯವನ್ನು ನಾವು ಅರ್ಥ ಮಾಡಿಕೊಂಡು ಎಲ್ಲರ ಜೊತೆ ಹೇಗಿರಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಬೇಕು ನಮ್ಮ ಆಂತರಿಕ ಒಳ ಜಗಳಗಳಿಂದ ನಾವು ಕೆಲಸ ಮಾಡುವ ಸಂಸ್ಥೆಗೆ ಕೆಟ್ಟ ಹೆಸರು ಬರಬಾರದು ಎಂಬ ಧ್ಯೇಯ ನಮ್ಮದಾಗಿರಬೇಕು.

  ಜೀವನವೆಂಬ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು

  ನಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಆಗಾಗ ಉಂಟಾಗುವ ಕಿರಿಕಿರಿ ನಮ್ಮ ಜೀವನಕ್ಕೇ ಕುತ್ತು ತರಬಾರದು. ನಮ್ಮನ್ನೇ ನಂಬಿಕೊಂಡು ನಮ್ಮ ಕುಟುಂಬದವರು ಇದ್ದಾರೆ ಎಂಬ ಆಲೋಚನೆ ಸದಾ ತಲೆಯಲ್ಲಿ ಇರಬೇಕು. ಕೆಲಸ ಬಿಡುವುದು ದೊಡ್ಡದಲ್ಲ ಆದರೆ ಇರುವ ಕೆಲಸವನ್ನು ಹೇಗೆ ಉಳಿಸಿಕೊಂಡು ನಮ್ಮ ಸಹೋದ್ಯೋಗಿಗಳ ನಡುವೆ ನಾವೂ ಒಳ್ಳೆಯ ಹೆಸರು ಸಂಪಾದನೆ ಮಾಡಿಕೊಂಡು ನಾವು ಕೆಲಸ ಮಾಡುವ ಸಂಸ್ಥೆಗೂ ಒಳ್ಳೆಯ ಹೆಸರು ತರಬೇಕೆಂಬ ಮನೋಭಿಲಾಷೆ ನಮ್ಮದಾಗಬೇಕು.

  ಇಷ್ಟಿದ್ದರೂ ಕೆಲಸ ಮಾಡಲು ಕೊನೆಗೂ ಮನಸ್ಸು ಒಪ್ಪುತ್ತಿಲ್ಲ ಎಂದರೆ ಯಾರಾದರೂ ನಮಗೆ ಹಿತವಾದವರು ಇದ್ದೇ ಇರುತ್ತಾರೆ. ಅವರ ಬಳಿ ನಮಗೆ ಎದುರಾಗುತ್ತಿರುವ ಕಷ್ಟಗಳನ್ನು ಮತ್ತು ಮಾನಸಿಕ ಹಿಂಸೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳಾಗಿದ್ದಾಗ ಪರೀಕ್ಷೆಯನ್ನು ಪಾಸ್ ಮಾಡಿದ ಹಾಗೆ ಉದ್ಯೋಗಿಗಳಾದ ಮೇಲೆ ಜೀವನವೆಂಬ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಎಂದರೆ ಇದೇ ಅಲ್ಲವೇ?.
' ಉದ್ಯೋಗಂ ಪುರುಷ ಲಕ್ಷಣಂ ' ಎನ್ನುವುದು ದಿನಗಳೆದಂತೆ ' ಉದ್ಯೋಗಂ ಸರ್ವ ಲಕ್ಷಣಂ ' ಎನ್ನುವ ರೀತಿ ಬದಲಾದಂತಿದೆ. ಹಿಂದಿನ ಕಾಲದಲ್ಲಿ ಪುರುಷರಿಗಷ್ಟೇ ಮೀಸಲಾಗಿದ್ದ ಉದ್ಯೋಗ ಕ್ಷೇತ್ರ ಈಗ ಮಹಿಳೆಯರನ್ನೂ ಕೈಬೀಸಿ ಕರೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಇಬ್ಬರೂ ಸಮಾನವಾದ ಸಾಧನೆ ಮಾಡುತ್ತಿದ್ದಾರೆ. ಆದರೆ ಜೀವನದಲ್ಲಿ ಉದ್ಯೋಗ ಒಂದು ಭಾಗವಾಗಿರಬೇಕೇ ವಿನಃ ಉದ್ಯೋಗವೇ ಜೀವನವಾಗಬಾರದು. ಸಂಸ್ಥೆಯ ಕಟ್ಟಪ್ಪಣೆಗಳಿಗೆ ಕಟ್ಟು ಬಿದ್ದು ಹಗಲು - ರಾತ್ರಿಯೆನ್ನದೆ ಕಷ್ಟ ಪಟ್ಟು ದುಡಿದು ನಮ್ಮ ದೇಹದ ಆರೋಗ್ಯಕ್ಕೆ ನಾವೇ ಸಮಸ್ಯೆ ತಂದುಕೊಳ್ಳಬಾರದು.

ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ಬಹಳ ಪ್ರೀತಿಯಿಂದ ಇಷ್ಟ ಪಟ್ಟು ಮಾಡಬೇಕು. ಮನೆಯ ಸದಸ್ಯರ ಜೀವನೋಪಾಯಕ್ಕೆ ಸರಿ ಹೊಂದುವಂತಹ ಸಂಪಾದನೆಯನ್ನು ಕೊಡುವಂತಹ ಕೆಲಸವಾದರೆ ಸಾಕಲ್ಲವೇ? ಹಾಗೆಂದು ಬೇರೆ ಇನ್ನಿತರ ಸಿಕ್ಕ ಸಿಕ್ಕ ಕೆಲಸಗಳನ್ನೆಲ್ಲಾ ಮೈ ಮೇಲೆ ಎಳೆದುಕೊಂಡು ಯಾವುದನ್ನೂ ಸರಿಯಾಗಿ ಮತ್ತು ಸರಿಯಾದ ಸಮಯಕ್ಕೆ ಮುಗಿಸಿ ಕೊಡದೇ ಮೇಲಿನವರಿಂದ ಸಹೋದ್ಯೋಗಿಗಳ ಎದುರು ಮಾತು ಕೇಳಿ ಕೊನೆಗೆ ಜೀವನದಲ್ಲಿ ಬೇಸರವಾಗಿ ತಮ್ಮ ನೆಚ್ಚಿನ ಕೆಲಸವನ್ನೇ ಬಿಡುವಂತಹ ಪರಿಸ್ಥಿತಿ ತಂದುಕೊಳ್ಳಬಾರದು. ಕೆಲಸವೆಂದರೆ ನಮ್ಮ ಸಂಸ್ಥೆ ನಮ್ಮನ್ನು ನಂಬಿ ನಮಗಾಗಿಯೇ ಕೊಟ್ಟಂತಹ ಒಂದು ಮಹತ್ತರ ಜವಾಬ್ದಾರಿ. ಅದನ್ನು ಸರಿಯಾದ ವಿಧದಲ್ಲಿ ನಿರ್ವಹಿಸಬೇಕಾದುದು ನಮ್ಮ ಕರ್ತವ್ಯ.

ಈ ಲೇಖನದಲ್ಲಿ ಕೆಲಸದ ಸಂದರ್ಭದಲ್ಲಿ ಎದುರಾಗುವ ಕೆಲವೊಂದು ಕಿರಿಕಿರಿಗಳು ಮನಸ್ಸಿಗೆ ಹೇಗೆ ಘಾಸಿ ಮಾಡುತ್ತವೆ, ಅದರಿಂದ ಏನೆಲ್ಲಾ ಅನರ್ಥಗಳು ಸಂಭವಿಸುತ್ತವೆ ಮತ್ತು ಅವುಗಳಿಂದ ಹೊರ ಬರುವುದು ಹೇಗೆ ಎಂಬ ಬಗ್ಗೆ ತಿಳಿಸಿ ಕೊಡಲಾಗಿದೆ.

 
ಟೆಕ್ನಾಲಜಿ