Back
Home » ಇತ್ತೀಚಿನ
ಸೈಬರ್ ಅಪರಾಧ-17: ರಾಜ್ಯದ ಒಂದೇ ಒಂದು ಪ್ರಕರಣದಲ್ಲೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ!
Gizbot | 23rd Oct, 2019 10:07 AM
 • ರಾಷ್ಟ್ರೀಯ ಅಪರಾಧ ದಾಖಲೆ

  ಹೌದು, 2017ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಈಚೆಗೆ ಬಿಡುಗಡೆ ಮಾಡಿರುವ 'ಭಾರತದಲ್ಲಿ ಅಪರಾಧ-2017' ವರದಿಯಲ್ಲಿ ಈ ಮಾಹಿತಿ ಇದ್ದು, ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ ದೆಹಲಿಯಲ್ಲೇ ಅತಿಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಒಟ್ಟಾರೆ ಅಪರಾಧ ಪ್ರಕರಣಗಳಲ್ಲಿ ದೆಹಲಿ ಮುಂದಿದ್ದರೆ, ಸೈಬರ್ ಪ್ರಕರಣಗಳಲ್ಲಿ ಬೆಂಗಳೂರು ಮುಂದಿದೆ. ಆದರೂ ಸಹ ನಗರ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬರುತ್ತಿದೆ.


 • ಸೈಬರ್ ಅಪರಾಧ

  ಸೈಬರ್ ಅಪರಾಧಗಳಲ್ಲಿ ಸಾಕ್ಷ ಕಲೆಹಾಕುವಲ್ಲಿ ಪೊಲೀಸರು ಹಿಂದೆ ಬೀಳುತ್ತಿದ್ದಾರೆ. ಸೈಬರ್ ಅಪರಾಧಗಳ ಬಗ್ಗೆ ಪೊಲೀಸರಿಗೆ ಅಗತ್ಯ ತರಬೇತಿ ಮತ್ತು ಅತ್ಯಾಧುನಿಕ ತಂತ್ರಾಂಶಗಳ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಮುಗ್ದರು ಸೈಬರ್ ಕಳ್ಳರಿಗೆ ಬಲಿಯಾಗುತ್ತಿರುವದನ್ನು ನಾವು ನೋಡಬಹುದು. ಹಾಗಾಗಿ, ಸೈಬರ್ ವಂಚನೆಯ ಬಗ್ಗೆ ನಾವೇ ಸುರಕ್ಷಿತವಾಗಿರಬೇಕಿದೆ. ಹಾಗಾದರೆ, ಈ ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಕಳ್ಳರ ವಂಚನೆ ಬಲೆಗೆ ಬೀಳದಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಅಂಶಗಳನ್ನು ಮುಂದೆ ಓದಿ ತಿಳಿಯಿರಿ.


 • ಏನಿದು ಸೈಬರ್ ವಂಚನೆ?

  ಸೈಬರ್ ಖದೀಮರು ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ವಿವರ ಸಂಗ್ರಹಿಸಿ ಕೋಟ್ಯಂತರ ರೂ. ಮೋಸ ಮಾಡುತ್ತಾರೆ. ಆನ್​ಲೈನ್ ಬೆದರಿಕೆ, ಅಪರಾಧ, ಸೈಬರ್ ಪೀಡನೆ, ಆನ್​ಲೈನ್ ಆಟಗಳು, ಇಮೇಲ್ ವಂಚನೆ, ಡೇಟಾ ಹ್ಯಾಕ್, ಸಾಮಾಜಿಕ ಜಾಲತಾಣಗಳ ಖಾತೆಗಳ ಸುರಕ್ಷತೆ ಈ ಸೈಬರ್ ವಂಚನೆಯ ಮೂಲಗಳಾಗಿದ್ದು, ಹಣ ಕದಿಯುವುದು ,ವೈಯಕ್ತಿಕ ಮಾಹಿತಿ ಕದ್ದು ಕಿರುಕುಳ ನೀಡುವುದು ಎಲ್ಲವೂ ಇದರೊಳಗೆ ಬರಲಿವೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


 • ಸಾರ್ವಜನಿಕರಿಗೆ ಆಪತ್ತು

  ಹ್ಯಾಕರ್​ಗಳು ಕೇವಲ ಹಣ ಗಳಿಸುವುದಕ್ಕಾಗಿ, ಮಾಲ್​ವೇರ್, ವೈರಸ್ ಅಥವಾ ಟ್ರೋಜರ್​ಗಳ ಮೂಲಕ ಕಂಪ್ಯೂಟರ್, ಮೊಬೈಲ್​ಗಳ ಮೇಲೆ ದಾಳಿ ನಡೆಸಿ ವೈಯಕ್ತಿಕ ಮತ್ತು ರಹಸ್ಯ ಮಾಹಿತಿ ಕದಿಯುತ್ತಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನ, ವ್ಯಾಪಾರ ಮತ್ತು ವಹಿವಾಟು ಇತ್ಯಾದಿಗಳಿಗೆ ಐಟಿ-ಬಿಟಿಗೆ ಒಗ್ಗಿಕೊಳ್ಳಲಾಗಿದೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕ್ರಿಮಿನಲ್‌ಗಳು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.


 • ‘ಸೈಬರ್ ಸುರಕ್ಷತಾ ಕೈಪಿಡಿ’

  ಇ-ಮೇಲ್ ಮೋಸ, ವೈಸರ್ ಇರುವ ಅಪ್ಲಿಕೇಷನ್ ಕಳುಹಿಸುವುದು ಸೇರಿದಂತೆ ಹೇಗೆಲ್ಲಾ ಸೈಬರ್ ಕ್ರಿಮಿನಲ್‌ಗಳು ಮೋಸ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚಿರುವ ಪೊಲೀಸ್ ಇಲಾಖೆ,ಜಾಗತಿಕ ಪೀಡುಗಾಗಿರುವ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿ ಜೀವನದಿಂದಲೇ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್ ಇಲಾಖೆ 'ಸೈಬರ್ ಸುರಕ್ಷತಾ ಕೈಪಿಡಿ' ಸಿದ್ಧಪಡಿಸಿದೆ. ಸೈಬರ್ ಪೀಡನೆಗೆ ಒಳಗಾದರೆ ಕಂಪ್ಯೂಟರ್, ಮೊಬೈಲ್ ಬಳಕೆ ನಿರ್ಬಂಧಿಸುವಂತಹ ಸಲಹೆಗಳನ್ನು ಪೊಲೀಸ್ ಇಲಾಖೆ ನೀಡಿದೆ.


 • ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

  ಪ್ರಾಥಮಿಕ ಹಂತದಲ್ಲಿ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಪಾಸ್ವರ್ಡ್ ಮಾಹಿತಿಯನ್ನು ಕೊಡಬಾರದು. ನಾವು ವ್ಯಕ್ತಿಗಳ ದುರುದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಕುಟುಂಬದ ವ್ಯಕ್ತಿಗಳು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರನ್ನು ಹೊರತು ಪಡಿಸಿ ಹಣಕಾಸು ಸಂಗತಿಗಳನ್ನು ಇನ್ಯಾರೊಂದಿಗೂ ಹಂಚಿಕೊಳ್ಳಬಾರದು. ನಮಗೆ ಗೊತ್ತಿರುವಂತೆ ಹೆಚ್ಚಿನ ಹಣಕಾಸು ವಂಚನೆ/ಕಳ್ಳತನ ಪರಿಚಯದವರಿಂದಲೇ ಆಗುತ್ತದೆ.


 • ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

  ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೆಡಿ. ಸೇವೆ ಒದಗಿಸುವವರಿಗೆ ಅನವಶ್ಯಕ ವಿಷಯಗಳಿಗಾಗಿ ತೊಂದರೆ ಕೊಡಬೇಡಿ("Do not disturb") ಎಂದು ನೋಂದಣಿ ಮಾಡಿಸಿಕೊಳ್ಳಿ. ಇದರಿಂದಾಗಿ ಅನವಶ್ಯಕ ಮತ್ತು ಫೇಕ್ ಕರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ವಂಚಕರಿಂದಲೂ ಮುಕ್ತಿ ಪಡೆಯಬಹುದು. ಇನ್ನುಆನ್​ಲೈನ್ ಆಟದ ವೇಳೆ ಧ್ವನಿ ಸಂದೇಶ, ವೆಬ್ ಕ್ಯಾಮರಾಗಳನ್ನು ಬಳಸಬೇಡಿ ಮತ್ತು ಆನ್​ಲೈನ್​ನಲ್ಲಿ ಪರಿಚಯವಾದ ವ್ಯಕ್ತಿ ಅಥವಾ ಮಹಿಳೆಯನ್ನು ನೇರ ಭೇಟಿ ಮಾಡಬೇಡಿ


 • ಇ-ಮೇಲ್ ಭದ್ರತೆ ಖಚಿತಪಡಿಸಿಕೊಳ್ಳಿ

  ಬ್ಯಾಂಕಿನವರು ನೀಡುವ ಇ-ಮೇಲ್ ಐಡಿಗಳನ್ನು ಸಹ ಹೆಚ್ಚು ಬಳಸಬಾರದು. ಅದರಿಂದಾಗಿ ಹೆಚ್ಚೆಚ್ಚು ಮೋಸ ಹೋಗಬೇಕಾಗುತ್ತದೆ. ಇ-ಮೇಲೆ ಮುಖಾಂತರ ಯಾವುದೇ ಸ್ಟೇಟ್ಮೆಂಟ್ ಗಳನ್ನು ತೆರೆಯಬಾರದು ಇದರಿಂದ ಅಪಾಯವೇ ಹೆಚ್ಚು. ಇ-ಮೇಲ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅವು ಬೇರೆ ವೆಬ್ಸೈಟ್ ಗೆ ಲಿಂಕ್ ಆಗುತ್ತವೆ. ಇದರಿಂದಾಗಿ ನಮ್ಮ ಅಂಕಿಅಂಶ ಹಾಗೂ ಮಾಹಿತಿಯ ಸೋರಿಕೆ ಆಗುತ್ತದೆ. ಇದರ ಜತೆ ಪ್ರಚಾರದ ಇ-ಮೇಲ್ ಗಳು ಸಹ ಬರುತ್ತವೆ. ಆದರಿಂದಾಗಿ ತುಂಬಾ ಜಾಗೂರತೆಯಿಂದ ಇರಬೇಕಾಗುತ್ತದೆ.


 • ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಿ

  ನಾವು ಹಣಕಾಸು ವ್ಯವಹಾರದ ಸಂದರ್ಭಗಳಲ್ಲಿ ಬಳಸುವ ಪಾಸ್ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಇದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಇದರಿಂದಾಗಿ ಇನ್ನೊಬ್ಬರೂ ನಿಮ್ಮ ಪಾಸ್ವರ್ಡ್ ಊಹಿಸಲು ಸಾಧ್ಯ ಇರುವುದಿಲ್ಲ. ಇದು ಬ್ಯಾಂಕ್ ಸಂಬಂಧಿ ವ್ಯವಹಾರಗಳಲ್ಲೂ ಪಾಲಿಸಬೇಕು. ಹೀಗೆ ಮಾಡಿದಾಗ ಸೈಬರ್ ಕ್ರಿಮಿನಲ್‌ಗಳಿಗೆ ನಿಮ್ಮ ಪಾಸ್‌ವರ್ಡ್ ಅನ್ನು ಊಹಿಸುವುದು ಕಷ್ಟವಾಗುತ್ತದೆ.


 • ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

  ಶಾಪಿಂಗ್ ವೆಬ್ಸೈಟ್ ಗಳನ್ನು ಬಳಸುವಾಗ ತುಂಬಾ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ವಂಚಕರು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಕೆಲ ನಕಲಿ ವೆಬ್ಸೈಟ್ ಗಳಿದ್ದು ಅವುಗಳಲ್ಲಿ ಶಾಪಿಂಗ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲವು ಅವರಿಗೆ ಲಭ್ಯವಾಗುತ್ತದೆ. ಇವೆಲ್ಲವೂ ವಂಚನೆಯ ಅನೆಕ ಮುಖಗಳಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ಕರ್ತವ್ಯ.


 • ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಸ್ನೇಹ ಬೇಡ

  ವೈಯಕ್ತಿಕ ಮಾಹಿತಿ, ಜನ್ಮ ದಿನಾಂಕ, ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಹಾಗೆಯೇ, ಅಪರಿಚಿತರು ಆನ್​ಲೈನ್​ನಲ್ಲಿ ಕಳುಹಿಸುವ ಸಾಫ್ಟ್​ವೇರ್, ಆನ್​ಲೈನ್ ಆಟ, ವಿಹಾರ ಆಪ್​ಗಳ ಆಹ್ವಾನವನ್ನು ಯಾವ ಕಾರಣಕ್ಕೂ ಬಳಸಬೇಡಿ. ಸೈಬರ್ ಪೀಡನೆಗೆ ಒಳಗಾದರೆ ಕಂಪ್ಯೂಟರ್, ಮೊಬೈಲ್ ಬಳಕೆ ನಿರ್ಬಂಧಿಸಿ ಎಂದು ಪೊಲೀಸ್ ಇಲಾಖೆ ಮಾರ್ಗದರ್ಶನ ನೀಡಿದೆ.
ಡಿಜಿಟಲ್ ಜಗತ್ತಿನತ್ತ ಮುನ್ನುಗ್ಗುವಂತೆ ಕೇಳಿಕೊಳ್ಳುವ ಸರ್ಕಾರವು ಅದಕ್ಕೆ ತಕ್ಕಂತೆ ಸರಿಯಾದ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲಾಗುತ್ತಿದೆ. 2015, 2016ಕ್ಕೆ ಹೋಲಿಸಿದರೆ 2017ರಲ್ಲಿ ದೇಶದಾದ್ಯಂತ ದಾಖಲಾಗಿರುವ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ ಇದ್ದು, 2017ರಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ ಈ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಪ್ರಕರಣದಲ್ಲೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

 
ಟೆಕ್ನಾಲಜಿ