Back
Home » ಸಮ್ಮಿಲನ
ವಿಶ್ವ ವಿದ್ಯಾರ್ಥಿಗಳ ದಿನ 2019: ದಿನಾಂಕ, ಇತಿಹಾಸ ಮತ್ತು ಮಹತ್ವ
Boldsky | 14th Oct, 2019 06:11 PM
 • ಪ್ರತಿ ವಿದ್ಯಾರ್ಥಿ ತಿಳಿದಿರಬೇಕಾದ ವಿಷಯ

  ಈ ದಿನಕ್ಕೂ, ಮಾಜಿ ರಾಷ್ಟ್ರಾಧ್ಯಕ್ಷ, ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂರಿಗೂ ಏನು ಸಂಬಂಧವಿದೆ, ಯಾವಾಗ ಆಚರಿಸಲಾಗುತ್ತಿದೆ, ಈ ದಿನದ ಲಾಂಛನ, ಇತಿಹಾಸ ಮಹತ್ವ ಮತ್ತು ವಿಶ್ವದ ಎಲ್ಲಾ ವಿದ್ಯಾರ್ಥಿಗಳಿಗೆ ಈ ದಿನಾಚರಣೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನೋಡೋಣ. ಈ ಲೇಖನದಲ್ಲಿ ಒದಗಿಸಲಾದ ಮಾಹಿತಿ ನಿಮಗೆ ಪ್ರಬಂಧ ಬರೆಯಲು ಮತ್ತು ವಿಶ್ವ ವಿದ್ಯಾರ್ಥಿ ದಿನದಂದು ಭಾಷಣವನ್ನು ತಯಾರಿಸಲು ಸಹಾಯ ಮಾಡುತ್ತದೆ, ಅಲ್ಲದೇ ಒಂದು ವೇಳೆ ಈ ದಿನದ ಆಚರಣೆಯ ಕುರಿತಾಗಿ ಮಾತನಾಡಲು ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಮತ್ತು ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.


 • ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸ

  ವಿಶ್ವ ವಿದ್ಯಾರ್ಥಿ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮಹಾನ್ ಭಾರತೀಯ ವಿಜ್ಞಾನಿ ಮತ್ತು ಭಾರತದ ಮಾಜಿ ಅಧ್ಯಕ್ಷ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆಯ ನೆನಪಿಗಾಗಿ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತದೆ. ಎ. ಪಿ. ಜೆ. ಅಬ್ದುಲ್ ಕಲಾಂ ಅವರನ್ನು ಭಾರತದಾದ್ಯಂತ ವಿದ್ಯಾರ್ಥಿಗಳು ಪ್ರೀತಿಸುತ್ತಿದ್ದರು. ಕಲಾಂ ಸ್ವತಃ ಶಿಕ್ಷಣ ನೀಡುವ ಶಿಕ್ಷಕರಾಗಲು ಹೆಚ್ಚು ಇಷ್ಟಪಡುತ್ತಿದ್ದರು ಹಾಗೂ ಹಾಗೇ ಆಗಬೇಕೆಂದೂ ಬಯಸಿದ್ದರು.

  ತಾವು ಸ್ವತಃ ಕಲಿತು ಕಲಿಸುವುದಲ್ಲದೇ ತಮ್ಮ ವಿದ್ಯಾರ್ಥಿಗಳೂ ಹೆಚ್ಚು ಹೆಚ್ಚಾಗಿ ಕಲಿತು ಮುಂದೆ ಬರಲು ಅವರು ಪ್ರೇರೇಪಿಸುತ್ತಿದ್ದರು. ಶಿಕ್ಷಣದ ಕುರಿತಾದ ಅವರ ಕಾಳಜಿ ಹಾಗೂ ಪ್ರೇರಣೆಯನ್ನು ಗಮನಿಸಿದ ವಿಶ್ವ ಸಂಸ್ಥೆ ಅವರ ಹುಟ್ಟಿದ ದಿನಾಂಕವನ್ನೇ ಅಂದರೆ ಅಕ್ಟೋಬರ್ ಹದಿನೈದರಂದು ವಿಶ್ವ ವಿದ್ಯಾರ್ಥಿಗಳ ದಿನದ ರೂಪದಲ್ಲಿ ಆಚರಿಸಲು ಕ್ರಮ ಕೈಗೊಂಡಿತು ಹಾಗೂ ಆ ಪ್ರಕಾರ ಈ ದಿನವನ್ನು 'ವಿಶ್ವ ವಿದ್ಯಾರ್ಥಿಗಳ ದಿನ'ದ ಹೆಸರಿನಲ್ಲಿಯೇ ಆಚರಿಸಲಾಗುತ್ತಿದೆ.


 • ವಿದ್ಯಾರ್ಥಿಗಳ ನೆಚ್ಚಿನ ಕಲಾಂ

  ಭಾರತ ಕಂಡ ರಾಷ್ಟ್ರಾಧ್ಯಕ್ಷರಲ್ಲಿಯೇ ಅತಿ ಹೆಚ್ಚಾಗಿ ಜನಮನ್ನಣೆ ಮತ್ತು ಪ್ರೀತಿಯನ್ನು ಗಳಿಸಿದ್ದವರೆಂದರೆ ಡಾ. ಕಲಾಂ. ಯುವಜನತೆ ಅವರನ್ನು ಶಿಕ್ಷಕರಿಗಿಂತಲೂ ಹೆಚ್ಚಾಗಿ ತಮ್ಮ ಮಾರ್ಗದರ್ಶಕನೆಂದೇ ಗುರುತಿಸುತ್ತಿದ್ದರು. ಕಲಾಂ ಸದಾ ತಮ್ಮ ವಿದ್ಯಾರ್ಥಿಗಳಿಗೆ ದೊಡ್ಡದನ್ನೇ ಕನಸು ಕಾಣಲು ಹಾಗೂ ಇದನ್ನು ಸಾಕಾರಗೊಳಿಸಲು ಯತ್ನಿಸಲೆಂದೇ ಪ್ರೇರಣೆ ನೀಡುತ್ತಿದ್ದರು. ಆದರೆ ಜುಲೈ 27, 2015ರಂದು ಅವರ ಅಕಾಲಿಕ ನಿಧನ ಕೇವಲ ಭಾರತ ಮಾತ್ರವಲ್ಲ, ವಿಶ್ವದ ಯುವಜನತೆಯನ್ನು ಬೆಚ್ಚಿ ಬೀಳಿಸಿತ್ತು. ಸಾರ್ಥಕ ಸಾವು ಎಂದು ನಾವು ಕರೆಯಬಹುದಾದ ಇವರ ಸಾವು ಇವರು ಅತ್ಯಂತ ಇಷ್ಟಪಡುತ್ತಿದ್ದ ಕಲಿಸುವಿಕೆಯ ಕ್ಷಣದಲ್ಲಿಯೇ ಸಂಭವಿಸಿತ್ತು.


 • ಕಲಾಂರ ಸಾರ್ಥಕ ಸಾವು

  ಐ ಐ ಎಂ ಶಿಲ್ಲಾಂಗ್ ನಲ್ಲಿ ಅವರು ಅಮ್ದು ತಮ್ಮ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾಗಲೇ ಅಕಾಸ್ಮಾತ್ತಾಗಿ ಕುಸಿದು ಬಿದ್ದರು ಹಾಗೂ ಹೆಚ್ಚೂ ಕಡಿಮೆ ಅದೇ ಕ್ಷಣದಲ್ಲಿ ಸಾವನ್ನಪ್ಪಿದರು. ಆ ದಿನದಂದು ಕಂಬನಿ ಮಿಡಿಯದ ಭಾರತೀಯನೇ ಇರಲಾರ. ಜಾತಿ, ಧರ್ಮ, ಕುಲ, ಅಂತಸ್ತು ಯಾವುದೂ ಈ ದಿನ ಪರಿಗಣನೆಗೇ ಬಂದಿರಲಿಲ್ಲ. ಅವರು ಕೇವದ ದೇಶದ ಮಾತ್ರವಲ್ಲ, ಪ್ರತಿ ಯುವಜನತೆಯ ಅಧ್ಯಕ್ಷರಾಗಿದ್ದರು. ಚಿಕ್ಕ ಹಳ್ಳಿಯಲ್ಲಿ ಪೇಪರ್ ವಿತರಿಸುತ್ತಿದ್ದ ಹುಡುಗನೊಬ್ಬ ಶ್ರೇಷ್ಠ ವಿಜ್ಞಾನಿ ಹಾಗೂ ಭಾರತದ ರಾಷ್ಟ್ರಾಧ್ಯಕ್ಷನಾಗಬಹುದು ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು.


 • ’ವಿಶ್ವ ವಿದ್ಯಾರ್ಥಿಗಳ ದಿನ’ ಆಚರಣೆಯ ಮಹತ್ವ, ಇದನ್ನೇಕೆ ಆಚರಿಸಬೇಕು?

  ಭಾರತ ಸಹಿತ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಡಾ. ಕಲಾಂ ರವರ ಜನ್ಮದಿನವನ್ನು 'ವಿಶ್ವ ವಿದ್ಯಾರ್ಥಿಗಳ ದಿನ'ದ ರೂಪದಲ್ಲಿ ಆಚರಿಸಲಾಗುತ್ತಿದೆ. ಈ ದಿನವನ್ನು ಶಾಲೆಗಳು, ಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಚರೈಸಲಾಗುತ್ತಿದೆ. ಡಾ. ಕಲಾಂ ರವರು ಜೀವಂತರಿದ್ದಾಗ ಎಷ್ಟು ಜನಪ್ರಿಯರಾಗಿದ್ದರೋ ಅದಕ್ಕೂ ಹೆಚ್ಚಾಗಿ ಅವರ ಮರಣಾನಂತರವೂ ಅವರ ಜನಪ್ರಿಯತೆ ಉಳಿದುಕೊಂಡಿದೆ ಹಾಗೂ ಇಂದಿಗೂ ಅವರ ಹೆಸರು ವಿದ್ಯಾರ್ಥಿಗಳಿಗೆ ಪ್ರೇರಣೆ ದೊರಕುತ್ತಿದೆ.

  ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿ ಹಾಗೂ ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ (ಡಿ ಆರ್ ಡಿ ಓ) ಗಳ ಅಧಿಕಾರಿಯಾಗಿ ನಿರ್ವಹಿಸಿದ ಕಾರ್ಯಗಳನ್ನು ಪರಿಗಣಿಸಿ 1981ರಲ್ಲಿ ಪದ್ಮಭೂಷಣ ಹಾಗೂ 1990ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಬಳಿಕ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

  ದೊಡ್ಡ ಮತ್ತು ಕಠಿಣ ಪರಿಶ್ರಮದಿಂದ ದೊಡ್ಡ ಕನಸುಗಳನ್ನು ಕಾಣಲು ವಿದ್ಯಾರ್ಥಿಗಳಿಗೆ ಸ್ವತಃ ಒಂದು ಮಾದರಿಯಾಗುವುದು ಬಹಳ ಮುಖ್ಯ. ಡಾ.ಅಬ್ದುಲ್ ಕಲಾಂ ಅವರ ಕೆಲಸ ಮತ್ತು ಶ್ರಮವನ್ನು ಜನರು ಅರ್ಥಮಾಡಿಕೊಳ್ಳುವುದು ಅವಶ್ಯಕ. ಆದ್ದರಿಂದ ರಾಷ್ಟ್ರ, ಸಮಾಜ ಮತ್ತು ವಿದ್ಯಾರ್ಥಿಗಳ ಸುಧಾರಣೆಗಾಗಿ ತಮ್ಮ ಜೀವನವನ್ನು ಕಳೆದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಲು ವಿಶ್ವ ವಿದ್ಯಾರ್ಥಿ ದಿನವನ್ನು ಆಚರಿಸುವುದು ಬಹಳ ಮುಖ್ಯವಾಗಿದೆ.


 • ’ವಿಶ್ವ ವಿದ್ಯಾರ್ಥಿಗಳ ದಿನ’ದ ಚಟುವಟಿಕೆಗಳು, ಕಾರ್ಯಕ್ರಮಗಳು ಮತ್ತು ಆಚರಣೆಯ ಕ್ರಮಗಳು

  ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜನ್ಮದಿನದ ಅಂಗವಾಗಿ ನಡೆಸಲಾಗುವ 'ವಿಶ್ವ ವಿದ್ಯಾರ್ಥಿಗಳ ದಿನ'ದಂದು ದಿನವಿಡೀ ಕೆಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ನಡೆಸಲಾಗುವ ಕಾರ್ಯಕ್ರಮಗಳಲ್ಲಿ ಭಾಷಣದ ಸಹಿತ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಸ್ಪರ್ಧೆಗಳಲ್ಲಿ ಚರ್ಚಾಸ್ಪರ್ಧೆ, ಪ್ರಬಂಧ ರಚನೆ, ಆಶುಭಾಷಣ, ಗುಂಪು ವಿಚಾರ ವಿನಿಮಯ, ವಾಕ್ಚಾತುರ್ಯ ಮೊದಲಾದವುಗಳಿರುತ್ತವೆ. ಅಲ್ಲದೇ ಶಾಲಾ ಕಾಲೇಜುಗಳ ಮಟ್ಟದಲ್ಲಿ ನಡೆಸಲಾಗುವ ವಿಜ್ಞಾನ ಮೇಳ, ವಿಜ್ಞಾನ ಪ್ರದರ್ಶನ ಮೊದಲಾದವುಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹಲವಾರು ವಿಷಯದ ಬಗ್ಗೆ ಕುತೂಹಲವನ್ನು ಮೂಡಿಸಲಾಗುತ್ತದೆ.

  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಕೆಲವಾರು ಸಾಕ್ಷ್ಯಚಿತ್ರಗಳನ್ನೂ ವೀಡಿಯೋ ಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ. ಇವು ಖಂಡಿತವಾಗಿಯೂ ಅತಿ ಕುತೂಹಲಕರ ಹಾಗೂ ಆಸಕ್ತಿಯನ್ನು ಕೆರಳಿಸುವಂತಹದ್ದಿರುತ್ತವೆ. ವಿದ್ಯಾರ್ಥಿಗಳ ಸುಪ್ತ ಭಾವನೆಗಳನ್ನು ಹೊರಗೆಳೆಯುವ ಬ್ಯಾನರ್ ರಚನೆ ಮೊದಲಾದವುಗಳನ್ನೂ ಏರ್ಪಡಿಸಲಾಗುತ್ತದೆ. ಆದ್ದರಿಂದ ಇವೆಲ್ಲಾ ವಿಶ್ವ ವಿದ್ಯಾರ್ಥಿಗಳ ದಿನವನ್ನು ಯಶಸ್ವಿಯಾಗಿ ಆಚರಿಸಲು ಈ ಎಲ್ಲಾ ಚಟುವಟಿಕೆಗಳು, ಘಟನೆಗಳು ಮತ್ತು ಆಚರಣೆಗಳು ನೆರವಾಗುತ್ತವೆ.
ಕಲಿಯುವಿಕೆ, ಇದು ನಿರಂತರ, ಮತ್ತು ಅನಂತ. ಜೀವಮಾನವಿಡೀ ನಾವು ಕಲಿಯುತ್ತಲೇ ಇರಬೇಕು ಹಾಗೂ ಮುನ್ನಡೆಯುತ್ತಲೇ ಇರಬೇಕು. ತಮ್ಮ ಸುತ್ತಮುತ್ತಲಿರುವ ವಸ್ತು, ವಿಷಯ ಹಾಗೂ ಆಗುಹೋಗುಗಳ ಬಗ್ಗೆ ಸತತವಾಗಿ ಅರಿಯುತ್ತಾ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರುವುದೇ ಜೀವನದ ಜೀವಾಳ. ಹುಟ್ಟಿದ ಕ್ಷಣದಿಂದ ಸಾವಿನ ಕ್ಷಣದವೆರೆಗೂ ನಮಗೆ ಒಂದಲ್ಲಾ ಒಂದು ಕಲಿಯಲಿಕ್ಕೆ ಇದ್ದೇ ಇರುತ್ತದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಮಗೆ ನೆರವಾಗುವ ಪ್ರತಿ ವ್ಯಕ್ತಿ ವಿಷಯಕ್ಕಿಂತಲೂ ಗುರುವಿನ ಮಹತ್ವ ಅತಿ ಹೆಚ್ಚು. ಹಾಗಾಗಿ ಗುರುವಿನ ಮೂಲಕ ಹೆಚ್ಚು ಹೆಚ್ಚು ಜನರಿಗೆ ಫಲ ದೊರಕಲೆಂದೇ ಗುರುಕುಲಗಳು ಪ್ರಾರಂಭಿಸಲ್ಪಟ್ಟವು.

ಇಂದಿನ ದಿನಗಳಲ್ಲಿ ಇವು ಇನ್ನಷ್ಟು ಬೆಳೆದು ವಿಶ್ವವಿದ್ಯಾಲಯಗಳಾಗಿ ರೂಪುಗೊಂಡಿವೆ. ಶಿಕ್ಷಣ ಇಂದು ಅಗತ್ಯತೆಗಿಂತಲೂ ಹೆಚ್ಚಾಗಿ ಸ್ಪರ್ಧಾತ್ಮಕವಾಗಿದೆ. ಈ ಸ್ಪರ್ಧೆಯಲ್ಲಿ ಜಯಗಳಿಸಲು ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಶ್ರಮ ವಹಿಸುತ್ತಾರೆ. ಒಂದು ವೇಳೆ ನೀವು ವಿದ್ಯಾರ್ಥಿಯಾಗಿದ್ದರೆ, ನಿಮಗೆ ನೆರವನ್ನು ನೀಡಲು ಹಲವು ಸಂಘಸಂಸ್ಥೆಗಳು, ಸರ್ಕಾರಗಳು ಕೆಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ರಾಜ್ಯ ಸರ್ಕಾರದ ಬಸ್ಸು ಪ್ರಯಾಣದ ಪಾಸು. ಆದರೆ ವಿಶ್ವಮಟ್ಟದಲ್ಲಿಯೂ ನಿಮಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ ಎಂದು ನಿಮಗೆ ಗೊತ್ತಿತ್ತೇ? ಹೌದೇ? ಯಾವ ದಿನ? ಇದೇ ವಿಶ್ವ ವಿದ್ಯಾರ್ಥಿಗಳ ದಿನ (World Students' Day) ಈ ಬಗ್ಗೆ ಪ್ರತಿ ವಿದ್ಯಾರ್ಥಿಯೂ ತಿಳಿದುಕೊಂಡಿರಬೇಕಾದ ವಿಷಯವನ್ನು ಇಂದಿನ ಲೇಖನದಲ್ಲಿ ಒದಗಿಸಲಾಗಿದೆ.

 
ಟೆಕ್ನಾಲಜಿ