Back
Home » ಸಮ್ಮಿಲನ
ವಾರದ ಎಲ್ಲಾ ದಿನಗಳು ಅದೃಷ್ಟ ತರಲು ಏನು ಮಾಡಬೇಕು ಗೊತ್ತೆ?
Boldsky | 14th Oct, 2019 11:27 AM
 • ಸೋಮವಾರವನ್ನು ಇನ್ನಷ್ಟು ಫಲಪ್ರದವನ್ನಾಗಿಸಲು ಸಲಹೆಗಳು

  ಸೋಮವಾರಗಳನ್ನಾಳುವ ದೇವರು ಸ್ವಯಂ ಭಗವಾನ್ ಶಿವನೇ ಆಗಿರುವನು. ಹೀಗಾಗಿ, ಅಂದಿನ ದಿನ ಆತನ ಶುಭಾಶೀರ್ವಾದಗಳೊಂದಿಗೆ ನಿಮ್ಮ ದಿನಚರಿಯನ್ನಾರಂಭಿಸಿದರೆ ನೀವು ಮುಟ್ಟಿದ್ದೆಲ್ಲವೂ ಚಿನ್ನವೇ ಆಗುತ್ತದೆ. ಯಾವುದೇ ವಿನೂತನ ಕೆಲಸವನ್ನು ಆರಂಭಿಸುವುದಕ್ಕೆ ಅಥವಾ ಯಾವುದೇ ಆರ್ಥಿಕ ಚಟುವಟಿಕೆಯನ್ನಾರಂಭಿಸುವುದಕ್ಕೆ ಸೋಮವಾರವೇ ಹೇಳಿ ಮಾಡಿಸಿದ ದಿನವಾಗಿದೆ.

  ಒಳ್ಳೆಯ ಅದೃಷ್ಟಕ್ಕಾಗಿ ಸೋಮವಾರಗಳಂದು ಶ್ವೇತ ವಸ್ತ್ರಗಳನ್ನು ಧರಿಸುವುದು ಬಹಳ ಒಳ್ಳೆಯದು. ಸೋಮವಾರಗಳಂದು ಯಾವುದೇ ಕಾರಣಕ್ಕೂ ಕಪ್ಪು ವಸ್ತ್ರಗಳನ್ನು ಧರಿಸಲೇ ಕೂಡದೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಸೋಮವಾರದಂದು ಅದೃಷ್ಟವನ್ನು ನಿಮ್ಮ ಪರವಾಗಿಸಿಕೊಳ್ಳುವುದರ ಅತ್ಯುತ್ತಮ ಮಾರ್ಗೋಪಾಯವೆಂದರೆ, ಅಂದಿನ ದಿನ ಮನೆಯಿಂದ ಹೊರಗೆ ಹೋಗುವುದಕ್ಕೆ ಮುಂಚೆ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳುವುದು. ಸೋಮವಾರದಂದು ಜೇನುತುಪ್ಪ ಹಾಗೂ ಸೌತೆಕಾಯಿಯ ಸೇವನೆಯು ನಿಮ್ಮ ಪಾಲಿಗೆ ಒಳ್ಳೆಯ ಅದೃಷ್ಟವನ್ನು ತರುವ ಸಾಧ್ಯತೆಯು ತುಂಬಾನೇ ಹೆಚ್ಚು.


 • ಮಂಗಳವಾರವನ್ನು ಅದೃಷ್ಟದ ದಿನವನ್ನಾಗಿಸಿಕೊಳ್ಳೋದು ಹೇಗೆ ?

  ಮಂಗಳವಾರದಂದು ನೀವು ಕೈಗೆತ್ತಿಕೊಳ್ಳುವ ಯಾವುದೇ ಕೆಲಸಕ್ಕೆ ತನ್ನ ಭರಪೂರ ಅನುಗ್ರಹವನ್ನು ಧಾರೆಯೆರೆಯುವ ದೇವನೆಂದರೆ ಅವನು ತಾಯಿ ದುರ್ಗಾದೇವಿಯ ಯೋಧ ಪುತ್ರನಾಗಿರುವ ಕಾರ್ತಿಕೇಯನು. ಸದಾಕಾಲವೂ ತನ್ನ ಭಕ್ತರ ಪಾಲಿಗೆ ಅನುಗ್ರಹದ ಮಳೆಯನ್ನೇ ಸುರಿಸುವ ಕಾರ್ತಿಕೇಯ ಸುಬ್ರಹ್ಮಣ್ಯನ ಶುಭಾಶೀರ್ವಾದವನ್ನು ಮಂಗಳವಾರದಂದು ಪಡೆದುಕೊಂಡಲ್ಲಿ ಆ ದಿನದ ಎಂತಹ ಸವಾಲನ್ನೂ ನಿರಾಯಾಸವಾಗಿ ಮೆಟ್ಟಿ ನಿಲ್ಲಬಹುದು. ಪಶುಸಂಗೋಪನೆಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನಾರಂಭಿಸೋದಕ್ಕೆ ಮಂಗಳವಾರವು ಹೇಳಿ ಮಾಡಿಸಿದ ದಿನ. ಕಾರ್ತಿಕೇಯ ಸುಬ್ರಹ್ಮಣ್ಯನಿಂದ ಅನುಗ್ರಹೀತನಾದರೆ ಎಂಥಹ ದುಷ್ಟಶಕ್ತಿಯನ್ನೂ ಮೆಟ್ಟಿ ನಿಲ್ಲೋದಕ್ಕೆ ಸಾಧ್ಯವಾಗುತ್ತದೆ.

  ಮಂಗಳವಾರದಂದು ಕೆಂಪು ಬಟ್ಟೆಯನ್ನು ಧರಿಸಿಕೊಳ್ಳುವುದು ಅತ್ಯಂತ ಪ್ರಯೋಜನಕಾರಿ. ಹಾಗೊಂದು ವೇಳೆ ಕೆಂಬಟ್ಟೆಯನ್ನು ಧರಿಸಿಕೊಳ್ಳಲಾಗದಿದ್ದಲ್ಲಿ, ಕೆಂಪು ಬಣ್ಣದ ಹೂವನ್ನು ಜೊತೆಯಲ್ಲಿಟ್ಟುಕೊಂಡಿದ್ದರೂ ಅದು ಆ ದಿನದಂದು ಒಳಿತನ್ನೇ ಆಕರ್ಷಿಸುತ್ತದೆ. ಮಂಗಳವಾರದ ಶುಭಫಲಕ್ಕಾಗಿ, ಅಂದು ಮನೆಯಿಂದ ಹೊರಹೋಗುವುದಕ್ಕೆ ಮೊದಲು, ಹಸಿರು ಕೊತ್ತಂಬರಿಯನ್ನು ಒಂದಲ್ಲ ಒಂದು ರೂಪದಲ್ಲಿ ಸೇವಿಸಿರಿ ಅಥವಾ ಬದನೆಕಾಯಿಗಳನ್ನು ಮತ್ತು ಆಲೂಗೆಡ್ಡೆಗಳನ್ನು ಸೇವಿಸುವುದರ ಮೂಲಕ ನಿಮ್ಮ ದಾರಿಯ ಅಡೆತಡೆಗಳನ್ನು ನಿವಾರಿಸಿಕೊಳ್ಳಿರಿ.


 • ಬುಧವಾರದಂದು ಶುಭಶಕುನಗಳ ಆಕರ್ಷಣೆ ಹೇಗೆ?

  ಬುಧವಾರದ ಅಧಿಪತಿ ಭಗವಾನ್ ಶ್ರೀ ವಿಷ್ಣುವೇ ಆಗಿರುವನು. ಅಲ್ಲದೇ ಪ್ರಣಯದಾಟಗಳಿಗೆ ಬುಧವಾರವು ಹೇಳಿಮಾಡಿಸಿದ ದಿನ. ತನ್ನ ಭಕ್ತರಿಗೆ ಬುಧವಾರಗಳಂದು ಮಹಾವಿಷ್ಣುವು ಅಪಾರ ಬುದ್ಧಿಮತ್ತೆಯೊಂದಿಗೆ ಹರಸುವನು. ಅಷ್ಟೇ ಅಲ್ಲ, ಬುಧವಾರಗಳಂದು ನಸುಕಿನಲ್ಲಿಯೇ ಕೈಗೊಳ್ಳುವ ಯಾವುದೇ ಕಿರುಪ್ರವಾಸಗಳೂ ಕೂಡಾ ಯಶಸ್ಸನ್ನು ಖಚಿತಪಡಿಸುತ್ತವೆ.

  ಹಸಿರು ಬಣ್ಣದ ಉಡುಗೆಯನ್ನು ಬುಧವಾರದಂದು ಧರಿಸಿಕೊಂಡಲ್ಲಿ, ಆ ದಿನದಂದು ನೀವು ಕೈಗೊಳ್ಳುವ ಎಲ್ಲಾ ಕೆಲಸಕಾರ್ಯಗಳೂ ಯಶಸ್ವಿಯಾಗಿ ನೆರವೇರುತ್ತವೆ. ಬುಧವಾರಗಳಂದು ಶುಭಫಲಗಳನ್ನಾಕರ್ಷಿಸುವ ದಿಶೆಯಲ್ಲಿ ಪ್ರಯೋಗಾತ್ಮಕವಾಗಿ ಕೈಗೊಂಡು ಸತ್ಫಲಗಳನ್ನು ಸಾಕಾರಗೊಳಿಸಿಕೊಂಡಿರುವ ಒಂದು ಚಟುವಟಿಕೆಯೆಂದರೆ, ಅದು ಅಂದು ಮನೆಯನ್ನು ಬಿಡುವುದಕ್ಕೆ ಮೊದಲು ಸಿಹಿಯನ್ನು ಸೇವಿಸಿ ಹೊರಡುವುದಾಗಿದೆ. ಅಷ್ಟೇ ಅಲ್ಲ, ಬುಧವಾರಗಳಂದು ಹುರುಳಿಯನ್ನೂ ಮತ್ತು ಹೆಸರುಕಾಳುಗಳನ್ನೂ ಸೇವಿಸಿದರೆ ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಕಟ್ಟಿದ್ದ ಬುತ್ತಿಯಾಗಿರುತ್ತದೆ.


 • ಗುರುವಾರದಂದು ಯಶಸ್ಸಿಗಾಗಿ ಮಾಡಬೇಕಾದದ್ದೇನು?

  ಗುರುವಾರವು ಭಗವತೀ ಲಕ್ಷ್ಮೀದೇವಿಯ ದಿನ. ದೇವರ ಅನುಗ್ರಹಕ್ಕೆ ಪಾತ್ರನಾಗಲು ಮತ್ತು ದೇವಸ್ಥಾನಗಳನ್ನು ಸಂದರ್ಶಿಸಲು ಹೇಳಿ ಮಾಡಿಸಿದ ದಿನವೆಂದರೆ ಅದು ಗುರುವಾರದ ದಿನ. ಆದರೆ, ಹಲವಾರು ಕೆಲಸಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಗುರುವಾರಗಳಂದು ದೀರ್ಘಪ್ರಯಾಣವನ್ನೇನಾದರೂ ಕೈಗೊಂಡಲ್ಲಿ ಅವುಗಳ ಪೈಕಿ ಎಲ್ಲ ಕೆಲಸಗಳೂ ಕೈಗೂಡಲಾರವೆಂಬ ನಂಬಿಕೆ ಇದೆ.

  ಗುರುವಾರದಂದು ಶುಭಶಕುನದ ಆಕರ್ಷಣೆಗಾಗಿ ಹಳದಿಬಣ್ಣದ ಅಥವಾ ಹಳದಿ-ಮಿಶ್ರಿತ ಬಿಳಿ ಇಲ್ಲವೇ ಬೂದು-ಮಿಶ್ರಿತ ಬಿಳಿ ಬಟ್ಟೆಯನ್ನು ಧರಿಸುವುದು ಬಲು ಸೂಕ್ತ. ಒಂದು ವೇಳೆ ಇಂತಹ ಬಣ್ಣದ ಬಟ್ಟೆಗಳನ್ನು ಧರಿಸಲು ಸಾಧ್ಯವಾಗದೇ ಹೋದಲ್ಲಿ, ನೀವು ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಹಳದಿ ಅಥವಾ ಹಳದಿ-ಮಿಶ್ರಿತ ಬಿಳಿ ಇಲ್ಲವೇ ಬೂದು-ಮಿಶ್ರಿತ ಬಿಳಿ ಹೂವನ್ನೂ ಇಟ್ಟುಕೊಳ್ಳಬಹುದು. ಗುರುವಾರಗಳಂದು ಅದೃಷ್ಟವನ್ನು ಆಕರ್ಷಿಸಲು ಇರುವ ಮಾರ್ಗೋಪಾಯವೆಂದರೆ ಮನೆಯಿಂದ ಹೊರಹೋಗುವುದಕ್ಕೆ ಮೊದಲು ಒಂದಲ್ಲ ಒಂದು ರೂಪದಲ್ಲಿ ಹಳದಿ ಸಾಸಿವೆಯನ್ನು ಸೇವಿಸುವುದು. ಅಷ್ಟೇ ಅಲ್ಲ, ಗುರುವಾರಗಳಂದು ತೊಗರಿಬೇಳೆ, ಪಪ್ಪಾಯಿ, ಹಾಗೂ ಅನ್ನದೊಂದಿಗೆ ತುಪ್ಪದ ಸೇವನೆಯೂ ಕೂಡಾ ನಿಮ್ಮ ಪಾಲಿಗೆ ಅದೃಷ್ಟವನ್ನು ತರಬಲ್ಲದು.


 • ಶುಕ್ರವಾರಗಳಂದು ಅದೃಷ್ಟ ದೇವತೆಯನ್ನು ಒಲಿಸಿಕೊಳ್ಳುವ ಬಗೆ ಹೇಗೆ ?

  ಭುವನೇಶ್ವರಿ ದೇವಿಯು ಶುಕ್ರವಾರವನ್ನಾಳುವ ಅಧಿದೇವತೆ. ಆಕೆಯ ಅನುಗ್ರಹಕ್ಕೆ ಪಾತ್ರರಾದಲ್ಲಿ ಎಲ್ಲವೂ ಒಳಿತೇ ಆಗುತ್ತದೆ. ಒಂದು ವಿನೂತನ ವಾಹನವನ್ನು ಖರೀದಿಸುವುದಕ್ಕೆ ಹಾಗೂ ಗಂಭೀರ ಸ್ವರೂಪದ ಖಾಯಿಲೆಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕೂ ಶುಕ್ರವಾರವು ಪ್ರಶಸ್ತ ದಿನವಾಗಿರುತ್ತದೆ. ಜೊತೆಗೆ ಚಿನ್ನ, ಬೆಲೆಬಾಳುವ ಹರಳುಗಳು, ಆಭರಣಗಳು ಹಾಗೂ ಒಂದು ಹೊಸ ಮನೆಯನ್ನೂ ಕೊಳ್ಳಲೂ ಶುಕ್ರವಾರವು ಪ್ರಶಸ್ತ ದಿನವಾಗಿರುತ್ತದೆ.

  ತೀರಾ ತಿಳಿನೀಲಿ ಅಥವಾ ಬಿಳಿಬಣ್ಣವು ಶುಕ್ರವಾರಗಳಂದು ಬಲು ಅದೃಷ್ಟದಾಯಕವಾಗಿರುತ್ತದೆ. ಶುಕ್ರವಾರಗಳಂದು ಅದೃಷ್ಟದೇವತೆಯನ್ನು ಸುಲಭವಾಗಿ ಒಲಿಸಿಕೊಳ್ಳುವ ಒಂದು ಉಪಾಯವೆಂದರೆ, ಅಂದು ಮನೆ ಬಿಡುವುದಕ್ಕೆ ಮೊದಲು ಒಂದಿಷ್ಟು ಗಿಣ್ಣನ್ನು ಸೇವಿಸುವುದು. ಅಥವಾ ಉತ್ತಮ ಫಲಿತಾಂಶಗಳಿಗಾಗಿ ನೀವು ಪನ್ನೀರನ್ನೋ ಇಲ್ಲವೇ ಇತರ ಹಾಲಿನ ಉತ್ಪನ್ನಗಳನ್ನೂ ಸೇವಿಸಬಹುದು.


 • ಶನಿವಾರಗಳಂದು ಎಲ್ಲವೂ ಒಳಿತಾಗಲು ಏನು ಮಾಡಬೇಕು ?

  ಶನಿವಾರದಂದು ಭಗವಾನ್ ಶನಿದೇವನ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದರಿಂದ ನಿಮ್ಮ ಜೀವನದ ಎಲ್ಲಾ ಅಡ್ಡಿಆತಂಕಗಳೂ ನಿರ್ಮೂಲಗೊಂಡು ಸುಗಮ ಜೀವನಕ್ಕೆ ನಾಂದಿ ಹಾಡಿದಂತಾಗುತ್ತದೆ. ಅಷ್ಟೇ ಸಾಲದು, ಮನೆಯಲ್ಲಿ ನೇರಳೆ ಬಣ್ಣದ ಹೂವನ್ನು ಇರಿಸಿಕೊಳ್ಳುವುದು ಅಥವಾ ಕೇವಲ ಕಪ್ಪು ಬಟ್ಟೆಗಳನ್ನಷ್ಟೇ ಧರಿಸಿಕೊಂಡಲ್ಲಿ, ಶನಿದೇವನ ಕೃಪೆಯೂ ನಿಮಗೆ ಒಲಿದು ಬರುತ್ತದೆ ಹಾಗೂ ಕೈಗೊಂಡ ಎಲ್ಲಾ ಕಾರ್ಯಗಳೂ ಯಶಸ್ವಿಯಾಗುತ್ತವೆ. ಶನಿವಾರಗಳಂದು ಒಳಿತನ್ನು ಬರಮಾಡಿಕೊಳ್ಳುವ ಸರಳ ಉಪಾಯವೆಂದರೆ, ಅಂದು ಮನೆಯಿಂದ ಹೊರಹೋಗುವುದಕ್ಕೆ ಮೊದಲು ಒಂದಿಷ್ಟು ತುಪ್ಪವನ್ನು ಸೇವಿಸುವುದಾಗಿರುತ್ತದೆ.


 • ಭಾನುವಾರಗಳಂದು ನಿರೀಕ್ಷಿತ ಕಾರ್ಯಗಳೆಲ್ಲವೂ ಹೂ ಎತ್ತಿದಷ್ಟೇ ಸಲೀಸಾಗಿ ಸಾಗುವಂತಾಗಲು ಏನು ಮಾಡಬೇಕು ?

  ಭಾನುವಾರವನ್ನಾಳುವ ದೇವನು ಸಾಕ್ಷಾತ್ ಸೂರ್ಯಭಗವಾನನು. ಅಂದಿನ ಅಧಿದೇವತೆ ಜಗತ್ತನ್ನೆಲ್ಲಾ ಬೆಳಗುವ ಸೂರ್ಯನು. ಹಳೆಯ ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಶಸ್ತ ದಿನವೇ ಭಾನುವಾರ. ಆದಾಗ್ಯೂ, ಹೊಸ ಮನೆಯನ್ನು ಪ್ರವೇಶಿಸುವುದಕ್ಕೆ ಭಾನುವಾರವು ಯೋಗ್ಯ ದಿನವೆಂದು ಪರಿಗಣಿತವಾಗಿಲ್ಲ. ಆದರೆ ಆಶ್ಚರ್ಯಕರ ಸಂಗತಿಯೇನೆಂದರೆ, ಭಾನುವಾರಗಳಂದು ಕೈಗೊಳ್ಳಲ್ಪಡುವ ಎಲ್ಲಾ ಪ್ರಯಾಣಗಳೂ ಅತ್ಯುತ್ತಮ ಫಲಿತಾಂಶಗಳನ್ನೇ ಕೊಡುತ್ತವೆ.

  ಗುಲಾಬಿ ಮತ್ತು ಕಡುಕೆಂಪು ವರ್ಣಗಳು ಭಾನುವಾರದಂದು ಬಲು ಪ್ರಶಸ್ತವಾದವುಗಳು. ಈ ದಿನದಂದು ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳುವ ಒಂದು ಸರಳ ಉಪಾಯವೆಂದರೆ, ಅಂದು ಮನೆಯಿಂದ ಹೊರಹೋಗುವ ಮೊದಲು ಬೀಡಾವನ್ನು ಸೇವಿಸುವುದು ಹಾಗೂ ಜೊತೆಗೆ ಸೂರ್ಯದೇವನಿಗೆ ನೀರಿನಿಂದ ಅರ್ಘ್ಯಪ್ರಧಾನವನ್ನು ಮಾಡುವುದರ ಮೂಲಕ ನಿಮ್ಮ ಜೀವನದುದ್ದಕ್ಕೂ ಮಂಗಳವನ್ನೇ ಬರಮಾಡಿಕೊಳ್ಳಬಹುದು. ಅಷ್ಟು ಮಾತ್ರವೇ ಅಲ್ಲ, ಭಾನುವಾರದಂದು ಹೆಸರುಬೇಳೆ ಹಾಗೂ ಬೇಲದ ಹಣ್ಣಿನ ಸೇವನೆಯು ಬಲು ಉಪಯುಕ್ತವಾದುದೆಂದು ಹೇಳಲಾಗಿದೆ.
ತನ್ನ ದಿನಚರಿಯನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಬೇಕೆಂದು ಯಾರಿಗೆ ತಾನೇ ಆಸೆ ಇರೋಲ್ಲ ಹೇಳಿ? ಅದರ ಬಗ್ಗೆ ಸಲಹೆ ಸೂಚನೆಗಳನ್ನ ಕೊಡೋದಕ್ಕೆ ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲೇ ವಿಫುಲ ವಸ್ತು, ವಿಷಯಗಳಿವೆ. ವಾರದ ಪ್ರತಿಯೊಂದು ದಿನವೂ ಒಂದು ನಿರ್ದಿಷ್ಟ ಗ್ರಹದ ಹಾಗೂ ಓರ್ವ ನಿರ್ದಿಷ್ಟ ದೇವರ/ದೇವತೆಯ ಅಧೀನವಾಗಿರುತ್ತದೆ ಎಂಬ ವಿಚಾರವು ನಿಮಗೆ ಗೊತ್ತೇ? ಆ ನಿರ್ದಿಷ್ಟ ಗ್ರಹಕ್ಕೆ ಹಾಗೂ ಆ ದೇವರಿಗೆ ಪ್ರೀತಿಪಾತ್ರವಾಗುವಂತಹ ಚಟುವಟಿಕೆಗಳನ್ನು ಅನುಸರಿಸುವುದರ ಮೂಲಕ ವಾರದ ನಿಮ್ಮ ಆಯಾಯ ದಿನಗಳನ್ನು ಹೇಗೆ ಇನ್ನಷ್ಟು ಫಲಪ್ರದವನ್ನಾಗಿ ಹಾಗೂ ಇನ್ನಷ್ಟು ಮಂಗಳಮಯವನ್ನಾಗಿ ಮಾಡಿಕೊಳ್ಳಬಹುದೆಂಬುದರ ಕುರಿತು ಇಲ್ಲೊಂದಿಷ್ಟು ಸಲಹೆ, ಸೂಚನೆಗಳನ್ನು ನಿಮಗಾಗಿ ನಾವಿಲ್ಲಿ ನೀಡಿದ್ದೇವೆ.

 
ಟೆಕ್ನಾಲಜಿ