Back
Home » ಸುದ್ದಿ
ಚಿತ್ರದುರ್ಗದಲ್ಲಿ ದೇವರಿಗೆ ಹಾವು, ಚೇಳು, ಕಪ್ಪೆ ಹರಕೆ ಸಲ್ಲಿಸುತ್ತಾರೆ ಜನ!
Oneindia | 9th Oct, 2019 07:28 PM
 • ವಿಜಯ ದಶಮಿ ನಂತರ ಅದ್ಧೂರಿಯ ಅಂಬಿನೋತ್ಸವ

  ಬಯಲು ಸೀಮೆಯ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಬಯಲು ಸೀಮೆಯ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆಯ ಶ್ರೀ ರಂಗನಾಥ ಸ್ವಾಮಿ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ಹಿನ್ನೀರಿನ ದಡದಲ್ಲಿರುವ ಶ್ರೀರಂಗನಾಥ ದೇವರ ಅಂಬಿನೋತ್ಸವ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆರವೇರುತ್ತದೆ. ವಿಜಯ ದಶಮಿ ನಂತರದ ದಿನ ಈ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ.

  ಜ್ಯೋತಿಷ್ಯ: ಹರಕೆ ತೀರಿಸದಿದ್ದರೆ ಏನೆಲ್ಲ ತೊಂದರೆ ಮತ್ತು ಪರಿಹಾರೋಪಾಯ

  ಹೊಸದುರ್ಗ ತಾಲೂಕಿನ ಹಂಚಿಬಾರಿಹಟ್ಟಿ ಗ್ರಾಮದಲ್ಲಿ (ಗೊಲ್ಲರಹಟ್ಟಿ) ಮೊದಲು ದೇವರ ಉತ್ಸವ ಮೂರ್ತಿಗೆ ಜಲಾಶಯದ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವರಿಸಿ ನಂತರ ಹಂಚಿಬಾರಿ ಹಟ್ಟಿಯಿಂದ ಉತ್ಸವ ಮೂರ್ತಿಯನ್ನು ಪಟ್ಟದ ಬಣ್ಣದ ಕುದುರೆಯ ಮೇಲೆ ಕೂರಿಸಿ ಪಲ್ಲಕ್ಕಿ ಮೇಲೆ ಹಾರನಕಣಿವೆ ಶ್ರೀರಂಗನಾಥ ಶಿಲಾಮೂರ್ತಿ ಇರುವ ಜಾಗಕ್ಕೆ ಕರೆತಂದು ಸಂಪ್ರದಾಯದಂತೆ ಪಟ್ಟದ ಪೂಜಾರಿ ದೇವರಿಗೆ ಪೂಜೆ ಸಲ್ಲಿಸಿದ ಮೇಲೆ ಅಂಬಿನೋತ್ಸವಕ್ಕೆ ಚಾಲನೆ ನೀಡುವರು.


 • ಮಳೆಯಾಗಲೆಂದು ದೇವರಿಗೆ ಸಿಹಿಯ ಹರಕೆ

  ಅಂಬಿನೋತ್ಸವ ಮುಗಿದ ದಿನವೇ ಉತ್ಸವ ಮೂರ್ತಿಯನ್ನು ಭಕ್ತಾದಿಗಳ ಸಮ್ಮುಖದೊಂದಿಗೆ ಹೊಸದುರ್ಗ ತಾಲೂಕಿನ ಹಂಚಿಬಾರಿಹಟ್ಟಿಗೆ ಹಿಂದಿರುಗಿಸಲಾಗುವುದು. ನಂತರ ಸಕ್ಕರೆ ಬಾಳೆ ಹಣ್ಣಿನ ನೈವೇದ್ಯದ ಹರಕೆ ಸಲ್ಲುತ್ತದೆ.

  ರೈತರು ತಾವು ಬೆಳೆದ ಬೆಳೆ ಫಲ ನೀಡಲಿ, ನಾಡಿನಲ್ಲಿ ಉತ್ತಮ ಮಳೆಯಾಗಲಿ ಎಂದು ಹರಕೆ ಹೊತ್ತಿರುತ್ತಾರೆ. ತಮ್ಮ ಆರೋಗ್ಯವನ್ನೂ ಸುಧಾರಿಸಲೆಂದು ಹರಕೆ ಹೊತ್ತಿರುತ್ತಾರೆ. ಅಂಥ ಭಕ್ತರು ತಾವು ತಂದಿರುವ ಸಕ್ಕರೆ, ಬಾಳೆಹಣ್ಣನ್ನು ಹಸಿರು ಗಿಡ ಅಥವಾ ಟಂಗಟೆ ಗಿಡದ ಬುಡದಲ್ಲಿ ಪೂಜೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ಇದಲ್ಲದೆ ಸಂತಾನ ಫಲ ಇಲ್ಲದವರೂ ತಮಗೆ ಸಂತಾನ ಫಲಿಸಲಿ ಎಂದು ಹರಕೆ ಮಾಡಿಕೊಳ್ಳುತ್ತಾರೆ.


 • ಜಾತ್ರೆಯಲ್ಲಿ ಚೇಳು, ಹಾವು ನೀಡುವ ಭಕ್ತರು

  ಚಿತ್ರದುರ್ಗದಲ್ಲಿ ಯಾರಿಗಾದರೂ ಹಾವು, ಚೇಳು ಕಡಿದಾಗ ಮೊದಲು ನೆನಪಿಸಿಕೊಳ್ಳುವುದೇ ಹಾರನಕಣಿವೆ ಶ್ರೀ ರಂಗನಾಥನನ್ನು. ಮನೆಗಳಲ್ಲಿ, ಹೊಲ ಗದ್ದೆಗಳಲ್ಲಿ ಯಾರಿಗಾದರೂ ಹಾವು, ಚೇಳು ಕಡಿದಾಗ ಅಥವಾ ಕಾಣಿಸಿಕೊಂಡಾಗ, ಕಪ್ಪೆಗಳು ಹೆಚ್ಚಾಗಿ ಕಂಡುಬಂದಾಗ "ಅಂಬಿನೋತ್ಸವದ ಜಾತ್ರೆಗೆ ಬಂದು ಹಾವು, ಚೇಳು, ಕಪ್ಪೆ ಕೊಟ್ಟು ಹರಕೆ ತೀರಿಸುತ್ತೇನೆ" ಎಂದು ಜನರು ದೇವರಿಗೆ ಹರಕೆ ಮಾಡಿಕೊಳ್ಳುತ್ತಾರಂತೆ.


 • ಹಾವು, ಚೇಳು, ಕಪ್ಪೆಯ ಪ್ರತಿಕೃತಿಯ ಅರ್ಪಣೆ

  ತಾವು ಹರಕೆ ಹೊತ್ತಂತೆ ಜಾತ್ರೆಯಲ್ಲಿ ತಾಮ್ರ, ಬೆಳ್ಳಿಯ ಹಾವು, ಚೇಳು, ಕಪ್ಪೆಯ ಪ್ರತಿಕೃತಿಯನ್ನು ಖರೀದಿಸಿ ದೇವರಿಗೆ ಅರ್ಪಿಸುತ್ತಾರೆ. ಒಂದು ಚೇಳು, ಹಾವಿನ ಪ್ರತಿಕೃತಿ 10 ರೂನಂತೆ ಮಾರಾಟವಾಗುತ್ತದೆ. ಹಲವು ಅಂಗಡಿಗಳೂ ಈ ಹರಕೆ ಪ್ರತಿಕೃತಿಗಳಿಗೆಂದೇ ಜಾತ್ರೆ ಸಮಯದಲ್ಲಿ ತೆರೆದುಕೊಂಡಿರುತ್ತವೆ.

  ನೆರೆಯ ರಾಜ್ಯವಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸೇರುತ್ತಾರೆ. ಬೆಂಗಳೂರು ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಂತೆ ಹಿರಿಯೂರಿನಿಂದ ಹೊಸದುರ್ಗ ಮಧ್ಯೆ 20 ಕಿ.ಮೀ. ದೂರ ಹಾಗೂ ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ 35 ಕಿ.ಮೀ ದೂರದಲ್ಲಿದೆ ಈ ದೇವಸ್ಥಾನ.
ಚಿತ್ರದುರ್ಗ, ಅಕ್ಟೋಬರ್ 9:‌ ಅಂದುಕೊಂಡಿದ್ದು ನೆರವೇರಿದರೆ ನಾನು ಹೀಗೆ ಮಾಡುತ್ತೇನೆ, ಈ ವಸ್ತು ಕೊಡುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಹರಕೆ ಕಟ್ಟಿಕೊಳ್ಳುವುದು ಶತಮಾನಗಳಿಂದಲೂ ಪಾಲಿಸುತ್ತಾ ಬಂದಿರುವ ನಂಬಿಕೆ. ಮನೆ, ಮದುವೆ, ಮಕ್ಕಳು, ಓದು... ಹೀಗೆ ಹರಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಿರಿಯರಿಂದ ಬಂದಿರುವ ಈ ಹರಕೆ ಕಟ್ಟಿಕೊಳ್ಳುವ, ಹಾಗೆಯೇ ಸಲ್ಲಿಸುವ ಪದ್ಧತಿ ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಅಷ್ಟೆ. ಸಾಮಾನ್ಯನಿಂದಿಡಿದು ದೊಡ್ಡ ದೊಡ್ಡ ರಾಜಕಾರಣಿಗಳೂ ತಮ್ಮ ತಮ್ಮ ಬಯಕೆಗಳ ಈಡೇರಿಕೆಗೆ ಹರಕೆ ಕಟ್ಟಿಕೊಳ್ಳುವವರೇ.

ಕೋಳಿ ಮರಿ ಎಸೆದು ಹರಕೆ ತೀರಿಸುವ ವಡಗಾವಿ ಜಾತ್ರೆ...

ಆದರೆ ಚಿತ್ರದುರ್ಗದ ಈ ದೇಗುಲದಲ್ಲಿ ವಿಚಿತ್ರವಾದ ಹರಕೆ ಸಲ್ಲಿಸುವ ಪದ್ಧತಿಯೊಂದಿದೆ. ಇತಿಹಾಸ ಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇಗುಲದಲ್ಲಿ ನಡೆಯುವ ಈ ಹರಕೆಯ ಹಿಂದಿನ ಕಾರಣ, ಉದ್ದೇಶವೂ ಅಚ್ಚರಿ ಮೂಡಿಸುತ್ತದೆ. ಹಾಗಿದ್ದರೆ, ಈ ಜಾತ್ರೆ, ಹರಕೆಯಲ್ಲಿ ಅಂಥದ್ದೇನಿದೆ ನೋಡೋಣ ಬನ್ನಿ...

   
 
ಟೆಕ್ನಾಲಜಿ