Back
Home » ಆರೋಗ್ಯ
ಕೊರೋನಾ ವೈರಸ್ ಕುರಿತ ಸತ್ಯಾಂಶಗಳೂ, ಹರಿದಾಡುತ್ತಿರುವ ಮಿಥ್ಯೆಗಳೂ
Boldsky | 19th Mar, 2020 10:19 AM
 • 1. ಮಿಥ್ಯೆ: ಕೊರೋನಾ ವೈರಸ್ ಬಿಸಿ ಅಥವಾ ಸೆಖೆಯ ಹವಾಮಾನದಲ್ಲಿ ಕೊಲ್ಲಲ್ಪಡುತ್ತದೆ.

  ವಾಸ್ತವಾಂಶ: ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ಮಾಹಿತಿಯ ಪ್ರಕಾರ, ಹಾಗೂ ಇದುವರೆಗೆ ಸಿಕ್ಕಿರುವ ಸಂಶೋಧನೆಗಳ ಸಾಕ್ಷಗಳ ಮೂಲಕ ಹೇಳುವುದಾದರೆ ಕೋವಿಡ್-19 ವೈರಸ್ (ನೋವೆಲ್ ಕೊರೋನಾ ವೈರಸ್) "ಎಲ್ಲಾ ಪ್ರದೇಶಗಳಲ್ಲಿ" ಅತಿ ಸುಲಭವಾಗಿ ಹರಡುವ ಕ್ಷಮತೆ ಹೊಂದಿದೆ. ಆ ದೇಶ ಮರುಭೂಮಿಯೇ ಆಗಿರಲಿ, ಶೀತಲ ಮಾರುತವೇ ಬೀಸುತ್ತಿರಲಿ, ಈ ವೈರಸು ಹರಡಿಯೇ ಹರಡುತ್ತದೆ. ಅಷ್ಟಲ್ಲದೇ ಇದ್ದರೆ ಆಸ್ಟ್ರೇಲಿಯಾ ಮತ್ತು ಮರುಭೂಮಿಯ ಕೊಲ್ಲಿ ರಾಷ್ಟ್ರಗಳ ಜನತೆ ನಿರಾಳರಾಗಿ ಇರಬಹುದಿತ್ತು!


 • 2. ಮಿಥ್ಯೆ: ಕೊರೋನಾ ವೈರಸ್ ಸೋಂಕು ಎದುರಾಗದೇ ಇರಲು ಬಿಸಿನೀರಿನ ಸ್ನಾನವೇ ಸಾಕು

  ವಾಸ್ತವಾಂಶ: ಕೋವಿಡ್-19 ಸೋಂಕನ್ನು ಸ್ನಾನ ಮಾತ್ರದಿಂದ ತಡೆಯಲು ಸಾಧ್ಯವಿಲ್ಲ. ನಮ್ಮ ದೇಹದ ತಾಪಮಾನ ಸಾಮಾನ್ಯವಾಗಿ 36.5°C ರಿಂದ 37°C ನಡುವೆ ಇರುತ್ತದೆ. ನಾವು ಬಿಸಿರಕ್ತದ ಜೀವಿಗಳಾದ ಕಾರಣ ತಣ್ಣೀರಿನಲ್ಲಿ ಸ್ನಾನ ಮಾಡಿದರೂ, ಬಿಸಿನೀರಿನ ಸ್ನಾನ ಮಾಡಿದರೂ ನಮ್ಮ ದೇಹದ ತಾಪಮಾನ ಇದರ ಪ್ರಭಾವದಿಂದ ಬದಲಾಗುವುದಿಲ್ಲ. ಹಾಗಾಗಿ, ಸ್ನಾನದ ಬದಲು ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರುವ ಮೂಲಕವೇ ಈ ವೈರಸ್ ಹರಡುವುದನ್ನು ತಪ್ಪಿಸಬಹುದು.


 • 3. ಮಿಥ್ಯೆ: ಮೈಮೇಲೆ ಆಲ್ಕೋಹಾಲ್ ಅಥವಾ ಕ್ಲೋರೀನ್ ಸಿಂಪಡಿಸಿದರೆ ವೈರಸ್ ಸಾಯುತ್ತದೆ.

  ವಾಸ್ತವಾಂಶ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೇಹದ ಮೇಲೆ ಮದ್ಯ ಅಥವಾ ಕ್ಲೋರೀನ್ ಸಿಂಪಡಿಸಿದರೂ ಈ ವೈರಸ್‌ ಕೊಲ್ಲಲ್ಪಡುವುದಿಲ್ಲ. ಏಕೆಂದರೆ ಈ ವೈರಸ್ ಮೈ ಮೇಲಿನಿಂದ ಅಲ್ಲ, ಬದಲಾಗಿ ನಮ್ಮ ಮೂಗು, ಗಂಟಲುಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಅಷ್ಟೇ ಅಲ್ಲ ಹೀಗೆ ಸಿಂಪಡಿಸುವುದರಿಂದ ಬಟ್ಟೆಗಳೂ ಹಾಳಾಗುತ್ತವೆ ಮತ್ತು ಬಾಯಿ, ಮೂಗು ಮೊದಲಾದ ಸೂಕ್ಷ್ಜ ಅಂಗಗಳಿಗೂ ಹಾನಿ ಉಂಟು ಮಾಡಬಹುದು.


 • 4. ಮಿಥ್ಯೆ: ಬೆಳ್ಳುಳ್ಳಿ ತಿನ್ನುವುದರಿಂದ ಹೊಸ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಬಹುದು.

  ವಾಸ್ತವಾಂಶ: ಬೆಳ್ಳುಳ್ಳಿ ಆರೋಗ್ಯ ವರ್ಧಕ ಹಾಗೂ ಅತಿಸೂಕ್ಷ್ಮ ಜೀವಿ ನಿರೋಧಕ ಗುಣಗಳನ್ನು ಹೊಂದಿದೆ ಎಂಬುದರಲ್ಲಿ ಹುರುಳಿಲ್ಲ. ಆದರೆ ಪ್ರಸ್ತುತ ಹರಡುತ್ತಿರುವ ಈ ಮಾರಕ ರೋಗಕ್ಕೆ ಬೆಳ್ಳುಳ್ಳಿಯೇ ಮದ್ದು ಎಂಬುದನ್ನು ಸಾಬೀತುಗೊಳಿಸುವ ಯಾವುದೇ ಸಾಕ್ಷ್ಯಾಧಾರವಿಲ್ಲ. ಒಂದು ವೇಳೆ ಬೆಳ್ಳುಳ್ಳಿ ತಿನ್ನುವುದೇ ಸಾಕಾಗಿದ್ದಿದ್ದರೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಯಾರಿಗೂ ಈ ಮಾಹಿತಿ ದೊರಕಿರಲೇ ಇಲ್ಲವೇ? ಅವರೇಕೆ ಇದನ್ನು ಹೇಳಿಲ್ಲ? ಕೊಂಚ ಯೋಚನೆ ಮಾಡಿದರೆ ಸತ್ಯ ಅರಿವಾಗುತ್ತದೆ.


 • 5. ಮಿಥ್ಯೆ: ಸೋಂಕು ಪೀಡಿತ ದೇಶದಿಂದ ಬಂದ ಲಕೋಟೆಯನ್ನು ಸ್ಪರ್ಶಿಸುವ ಮೂಲಕ ಸೋಂಕು ಎದುರಾಗಬಹುದು

  ವಾಸ್ತವಾಂಶ: ಕೊರೋನಾ ವೈರಸ್ ಜೀವಂತವಾಗಿ ಉಳಿಯಲು ಇದಕ್ಕೆ ನೀರಿನ ತೇವ ಅಗತ್ಯವಾಗಿದೆ. ಸೋಂಕು ಪೀಡಿಯ ವ್ಯಕ್ತಿಯ ಸೀನುವಿಕೆ, ಕೆಮ್ಮಿನಿಂದ ಸಿಡಿಯುವ ಸೂಕ್ಷ್ಮಕಣಗಳ ಮೂಲಕ ಇವು ಹರಡುತ್ತವೆ. ಒಮ್ಮೆ ಈ ತೇವ ಆರಿದರೆ ಇದರಲ್ಲಿದ್ದ ವೈರಸ್ಸು ಕೆಲವು ಘಂಟೆಗಳಲ್ಲಿಯೇ ಸಾಯುತ್ತವೆ. ವಿದೇಶದಿಂದ ಬಂದ ಲಕೋಟೆಗೆ, ಒಂದು ವೇಳೆ ಈ ಸೋಂಕು ಇರುವ ಹನಿ ಸಿಡಿದಿದ್ದರೂ, ಅಲ್ಲಿಂದ ಇಲ್ಲಿ ತಲುಪುವವರೆಗೆ ವಾರಗಳೇ ಬೇಕಾಗಬಹುದು. ಅತಿ ತ್ವರಿತವಾಗಿ ಎಂದರೂ ಒಂದೆರಡು ದಿನವಾದರೂ ಬೇಕು. ಅಷ್ಟರಲ್ಲಿ ಈ ವೈರಸ್ ಸತ್ತಿರುತ್ತದೆ.


 • 6. ಮಿಥ್ಯೆ: ಈ ಹೊಸ ವೈರಸ್ ಕೇವಲ ವೃದ್ದರ ಮೇಲೆ ಮಾತ್ರವೇ ಆಕ್ರಮಣ ಮಾಡುತ್ತದೆ.

  ವಾಸ್ತವಾಂಶ: ಈ ಸೋಂಕು ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಆವರಿಸಬಹುದು. ಆದರೆ ವೃದ್ದರು, ಈಗಾಗಲೇ ಬೇರಾವುದೋ ಕಾಯಿಲೆ ಇರುವ ವ್ಯಕ್ತಿಗಳು (ಅಸ್ತಮಾ, ಮಧುಮೇಹ, ಹೃದ್ರೋಗ) ಮೊದಲಾದ ವ್ಯಕ್ತಿಗಳಿಗೆ ಈ ಸೋಂಕಿನಿಂದ ಆರೋಗ್ಯ ಬಿಗಡಾಯಿಸುವ ಸಾಧ್ಯತೆ ಉಳಿದವರಿಗಿಂತ ಹೆಚ್ಚಿರುತ್ತದೆಯೇ ವಿನ ಉಳಿದವರೆಲ್ಲಾ ಕ್ಷೇಮ ಎಂದು ಸರ್ವಥಾ ಅರ್ಥವಲ್ಲ.


 • 7. ಮಿಥ್ಯೆ: ಪ್ರತಿಜೀವಕಗಳೇ ಈ ವೈರಸ್ ಸೋಂಕಿನ ಚಿಕಿತ್ಸೆಗೆ ಸಾಕಾಗುತ್ತದೆ

  ವಾಸ್ತವಾಂಶ: ಇಲ್ಲ, ಪ್ರತಿಜೀವಕಗಳೇನಿದ್ದರೂ ಬ್ಯಾಕ್ಟೀರಿಯಾಗಳ ಮೇಲೆ ಕೆಲಸ ಮಾಡುತ್ತವೆಯೇ ಹೊರತು ವೈರಸ್ಸುಗಳ ಮೇಲಲ್ಲ. ಕೊರೋನಾ ಸಹಾ ಒಂದು ವೈರಸ್ ಆಗಿದ್ದು ಇದನ್ನು ತಡೆಯಲು ಪ್ರತಿಜೀವಕ ಔಷಧಿಗಳು (ಆಂಟಿ ಬಯಾಟಿಕ್ಸ್) ಸಮರ್ಥವಲ್ಲ. ಹಾಗಾಗಿ ಇದನ್ನು ಚಿಕಿತ್ಸೆಗೆ ಬಳಸುವ ಅಗತ್ಯವಿಲ್ಲ. ಆದರೆ ವೈದ್ಯರು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ವೈರಸ್ಸಿನ ಜೊತೆ ಜೊತೆಗೇ ಬ್ಯಾಕ್ಟೀರಿಯಾದ ಸೋಂಕು ಸಹಾ ಇದ್ದರೆ ಈ ಔಷಧಿಗಳನ್ನು ನೀಡಬಹುದು.


 • 8. ಮಿಥ್ಯೆ: ಆಗಾಗ ಉಪ್ಪುನೀರಿನಿಂದ ಮೂಗನ್ನು ತೊಳೆದುಕೊಳ್ಳುತ್ತಿರುವ ಮೂಲಕ ಹೊಸ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಬಹುದು

  ವಾಸ್ತವಾಂಶ: ಇಲ್ಲ, ಈ ಮಾಹಿತಿಯನ್ನು ದೃಢೀಕರಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಯಾವುದೇ ಖಚಿತ ಮಾಹಿತಿ ಇಲ್ಲ. ಅನಧಿಕೃತವಾಗಿ ಹೇಳುವ ಯಾವುದೇ ಮಾಹಿತಿಯನ್ನು ನಂಬುವಂತಿಲ್ಲ.


 • 9. ಮಿಥ್ಯೆ: ದೇಹದ ತಾಪಮಾನವನ್ನು ಅಳೆಯುವ ಸ್ವಯಂಚಾಲಿತ ಸ್ಕ್ಯಾನರ್ ಗಳು ಸೋಂಕು ಪೀಡಿತ ವ್ಯಕ್ತಿಗಳನ್ನು ಗುರುತಿಸಬಲ್ಲವು

  ವಾಸ್ತವಾಂಶ: ಹೆಸರೇ ಸೂಚಿಸುವಂತೆ ಇವು ವ್ಯಕ್ತಿಯ ದೇಹದ ತಾಪಮಾನವನ್ನು ಅಳೆಯುತ್ತವೇ ಹೊರತು ಸೋಂಕನ್ನಲ್ಲ! ಒಂದು ವೇಳೆ ದೇಹದ ತಾಪಮಾನ ಸಾಮಾನ್ಯಕ್ಕೂ ಹೆಚ್ಚಿದ್ದರೆ ಈ ವ್ಯಕ್ತಿಗಳನ್ನು ಮೊದಲು ಪ್ರತ್ಯೇಕಿಸಿ ದೇಹ ಬಿಸಿಯಾಗಲು ಕಾರಣವೇನು ಎಂಬುದರ ಪರೀಕ್ಷೆಯನ್ನು ಪ್ರಾರಂಭಿಸಲು ಈ ಉಪಕರಣ ನೆರವಾಗುತ್ತದೆ. ಪರೀಕ್ಷೆಯ ಬಳಿಕವೇ ಈ ವ್ಯಕ್ತಿಗಳಿಗೆ ಸೋಂಕು ಇದೆಯೇ ಇಲ್ಲವೇ ಖಚಿತವಾಗುತ್ತದೆಯೇ ಹೊರಲು ಸ್ಕ್ಯಾನರ್ ಸೋಂಕು ಇರುವುದನ್ನು ತೋರಿಸುವುದಿಲ್ಲ. ಅಷ್ಟೇ ಅಲ್ಲ, ವ್ಯಕ್ತಿಗೆ ಜ್ವರ ಇದ್ದರೂ ಇದು ಕೊರೋನಾ ವೈರಸ್ ನಿಂದಲೇ ಬಂದಿದ್ದೆಂದು ಆ ಕ್ಷಣ ಹೇಳಲು ಸಾಧ್ಯವಿಲ್ಲ. ಏಕೆಂದರೆ ಸೋಂಕು ಹರಡಿದ ಎರಡರಿಂದ ಹತ್ತು ದಿನಗಳ ಬಳಿಕವೇ ಸೋಂಕಿನ ಲಕ್ಷಣಗಳು ಕಾಣತೊಡಗುತ್ತವೆ.


 • 10. ಮಿಥ್ಯೆ: ನ್ಯುಮೋನಿಯಾ ಲಸಿಕೆಗಳೇ ಕೊರೋನಾ ವೈರಸ್ಸಿಗೂ ಸಾಕು

  ವಾಸ್ತವಾಂಶ: ಇಲ್ಲ. ನ್ಯೂಮೋಕ್ಕೋಕ್ಕಲ್, ಹೀಮೋಫೈಲಸ್ ಇನ್ಸ್ಫುಯೆಂಜಾ ಟೈಬ್ ಬಿ (ಹೆಚ್ ಐ ಬಿ) ಮೊದಲಾದ ಲಸಿಕೆಗಳು ಕೊರೋನಾ ವೈರಸ್ ವಿರುದ್ಧ ರಕ್ಷಣೆ ನೀಡಲಾರವು. ಈ ಮಾಹಿತಿ ಪ್ರಕಟವಾಗುವ ಸಮಯದವರೆಗೆ ಈ ವೈರಸ್ಸಿಗೆ ಲಸಿಕೆ ಸಿದ್ದವಾಗಿಲ್ಲ. ಇದು ಇದುವರೆಗೆ ಇರದಿದ್ದ ಹೊಸ ತಳಿಯ ವೈರಸ್ ಆಗಿದೆ. ಸಂಶೋಧನೆ ವಿಶ್ವದಾದ್ಯಂತ ಭರದಿಂದ ನಡೆಯುತ್ತಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಈ ಸಂಶೋಧನೆಗಳ ಮೇಲ್ವಿಚಾರಣೆ ನಡೆಸುತ್ತಾ ಸೂಕ್ತ ಪರಿಹಾರಕ್ಕಾಗಿ ಶ್ರಮಿಸುತ್ತಿದೆ.


 • 11. ಮಿಥ್ಯೆ: ನಾಯಿ ಮತ್ತು ಬೆಕ್ಕುಗಳ ಸಹಿತ ಪ್ರಾಣಿಗಳೆಲ್ಲವೂ ಸೋಂಕು ಹರಡಬಲ್ಲವು

  ವಾಸ್ತವಾಂಶ: ಈ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂಬುದನ್ನು ಖಚಿತಪಡಿಸುವ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಹೌದಾಗಿದ್ದರೆ ಈಗಾಗಲೇ ಸೋಂಕು ಹರಡಿರುವ ಮನೆಯ ಸಾಕುಪ್ರಾಣಿಗಳಿಗೂ ಸೋಂಕು ಎದುರಾಗಬೇಕಿತ್ತು. ಚೀನಾದಲ್ಲಿ ನಾಯಿಯೊಂದಕ್ಕೆ ಆತನ ಮಾಲಿಕನಿಂದ ಕೋವಿಡ್ -19 ಸೋಂಕು ಎದುರಾಗಿತ್ತು. ಆದರೆ ಸೋಂಕು ಇದ್ದರೂ ನಾಯಿ ಕಾಯಿಲೆ ಬೀಳಲಿಲ್ಲ ಅಥವಾ ಕಾಯಿಲೆಯ ಲಕ್ಷಣಗಳನ್ನೂ ಪ್ರಕಟಿಸಲಿಲ್ಲ. .ಅಂದರೆ ಸಾಕು ಪ್ರಾಣಿಗಳಿಗೆ ತಮ್ಮ ಮನೆಯ ಮಾಲಿಕರಿಂದ ಸೋಂಕು ಎದುರಾಗುವ ಸಾಧ್ಯತೆ ಇದೆಯೇ ಹೊರತು ಪ್ರಾಣಿಗಳಿಂದ ಮನುಷ್ಯರಿಗೆ ಇಲ್ಲ ಎಂದು ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆದರೂ, ಸಾಕುಪ್ರಾಣಿಗಳ ಮೈಯಲ್ಲಿಯೂ ಕ್ರಿಮಿಗಳಿರಬಹುದು ಹಾಗೂ ಇವುಗಳು ಮನುಷ್ಯರನ್ನು ಕಾಯಿಲೆಗೆ ತುತ್ತಾಗಿಸಬಹುದು. ಹಾಗಾಗಿ, ಸ್ವಚ್ಟತಾ ಕ್ರಮಗಳನ್ನು ಸಾಕು ಪ್ರಾಣಿಗಳಿಗೂ ಅನ್ವಯಿಸುವುದು ಅಗತ್ಯ.


 • 12. ಮಿಥ್ಯೆ: ಅತಿ ನೇರಳೆ ಕಿರಣಗಳು ಕೊರೋನಾ ವೈರಸ್ಸುಗಳನ್ನು ಕೊಲ್ಲಬಲ್ಲವು

  ವಾಸ್ತವಾಂಶ: ಅತಿ ನೇರಳೆ ಕಿರಣಗಳು ತ್ವಚೆಗೆ ಹಾನಿಕಾರಕವಾಗಿವೆ. ಇವನ್ನು ಕೈಗಳನ್ನು ಸ್ವಚ್ಛಗೊಳಿಸಲಾಗಲೀ ಸೋಂಕು ನಿವಾರಿಸಲಾಗಲೀ ಬಳಸಬಾರದು. ಏಕೆಂದರೆ ಈ ಕಿರಣಗಳು ಹೊರಚರ್ಮದಿಂದ ತೂರಿ ಒಳಚರ್ಮಕ್ಕೆ ತಲುಪುತ್ತದೆ ಹಾಗೂ ಚರ್ಮದ ಆಳದಲ್ಲಿ ಹಾನಿ ಎಸಗುತ್ತದೆ. ತನ್ಮೂಲಕ ಚರ್ಮದಲ್ಲಿ ಭಾರೀ ಉರಿ ಎದುರಾಗುತ್ತದೆ.


 • 13. ಮಿಥ್ಯೆ: ಕೋವಿಡ್ -19 ಸೋಂಕಿಗೆ ಈಗಾಗಲೇ ಲಸಿಕೆ ಲಭ್ಯವಿದೆ

  ವಾಸ್ತವಾಂಶ: ಸಧ್ಯಕ್ಕೆ ಕೊರೋನಾ ವೈರಸ್ ಗೆ ಯಾವುದೇ ಔಷಧಿ ಅಥವಾ ಲಸಿಕೆ ಇಲ್ಲ. ಇದನ್ನು ನಿರ್ಮಿಸಲು ಜಗತ್ತಿನಾದ್ಯಂತ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಸಾಮಾನ್ಯವಾಗಿ ಯಾವುದೇ ಔಷಧಿಯನ್ನು ಕಂಡು ಹಿಡಿದರೂ ಇವುಗಳ ವ್ಯಾಪಕ ಪರೀಕ್ಷೆ ಆಗಬೇಕು ಹಾಗೂ ಮನುಷ್ಯರ ಬಳಕೆಗೆ ಸೂಕ್ತವಾಗಿದೆ ಎಂದು ಸಾಬೀತುಗೊಳಿಸಲ್ಪಡಬೇಕು. ಇವೆಲ್ಲಾ ಆಗಲು ಕೆಲವಾರು ತಿಂಗಳುಗಳೇ ಹಿಡಿಯಬಹುದು.


 • 14. ಮಿಥ್ಯೆ: ಇದು ಸಾಮಾನ್ಯ ಶೀತದ ವೈರಸ್ಸಿನ ರೂಪಾಂತರವಾಗಿದೆ.

  ವಾಸ್ತವಾಂಶ: ಇಲ್ಲ, ಶೀತ ಎದುರಾಗಲು ಪ್ರತಿ ಬಾರಿ ಬೇರೆ ಬೇರೆ ವೈರಸ್ಸುಗಳೇ ಕಾರಣವಾಗಿರುತ್ತವೆ. ಶೀತ ಕಡಿಮೆಯಾಯಿತು ಎಂದರೆ ದೇಹ ಆ ವೈರಸ್ಸಿಗೆ ರೋಗ ನಿರೋಧಕ ಶಕ್ತಿ ಪಡೆದುಕೊಂಡಿದು ಎಂದು ಅರ್ಥ. ಕೊರೋನಾ ಎಂಬುದು ವೈರಸ್ ನ ಒಂದು ವರ್ಗವಾಗಿದೆ. ಇದರಲ್ಲಿ ಕೆಲವಾರು ಬಗೆಯ ವೈರಸ್ಸುಗಳಿವೆ ಹಾಗೂ ಬೇರೆ ಬೇರೆ ಬಗೆಯ ಕಾಯಿಲೆಗಳನ್ನು ತಂದೊಡ್ಡುತ್ತವೆ. ಆದರೆ SARS ಮತ್ತು CoV-2 ವೈರಸ್ಸುಗಳಿಂದ ಎದುರಾಗುವ ಲಕ್ಷಣಗಳಲ್ಲಿ ಕೆಲವು ಸಮಾನವಾಗಿವೆ. ಇವುಗಳಲ್ಲಿ ನಾಲ್ಕು ಬಗೆಯ ಕೊರೋನಾ ವೈರಸ್ಸುಗಳು ಶೀತದಂತಹ ಲಕ್ಷಣವನ್ನು ಪ್ರಕಟಿಸುತ್ತವೆ.


 • 15. ಮಿಥ್ಯೆ: ಮಕ್ಕಳಿಗೆ ಕೊರೋನಾ ವೈರಸ್ ಸೋಂಕು ಬರುವುದಿಲ್ಲ

  ವಾಸ್ತವಾಂಶ: ಮಕ್ಕಳಿಗೂ ಕೋವಿಡ್-19 ಸೋಂಕು ಕಾಣಿಸಿಕೊಳ್ಳಬಹುದು. ಆದರೆ ಪ್ರಾರಂಭಿಕ ಮಾಹಿತಿಗಳಲ್ಲಿ ಸೋಂಕಿಗೆ ಒಳಗಾದವರವಲ್ಲಿ ವೃದ್ದರೇ ಹೆಚ್ಚು ಮತ್ತು ಮಕ್ಕಳ ಸಂಖ್ಯೆ ಕಡಿಮೆ ಎಂದು ತಿಳಿಸಿದೆ. ಆದರೂ, ಇತ್ತೀಚಿನ ಸಂಶೋಧನೆಗಳ ಮೂಲಕ ಸೋಂಕು ತಗಲಲು ಹಿರಿಯರಷ್ಟೇ ಸಮಾನವಾಗಿ ಮಕ್ಕಳಿಗೂ ತಗಲುವ ಸಾಧ್ಯತೆಗಳಿವೆ.


 • 16. ಮಿಥ್ಯೆ:ವಿಟಮಿನ್ ಸಿ ಹೆಚ್ಚುವರಿ ಔಷಧಿಗಳು ನಿಮಗೆ ಸೋಂಕು ಎದುರಾಗದಂತೆ ಕಾಪಾಡುತ್ತವೆ.

  ವಾಸ್ತವಾಂಶ: ಸಂಶೋಧಕರಿಗೆ ಇದುವರೆಗೂ ವಿಟಮಿನ್ ಸಿ ಹಾಗೂ ಕೋವಿಡ್-19 ಸೋಂಕು ಎದುರಾಗುವುದರಿಂದ ರಕ್ಷಿಸುವುದಕ್ಕೂ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ.


 • 17. ಮಿಥ್ಯೆ: ಒಂದು ವೇಳೆ ನೀವು ಹತ್ತು ಸೆಕೆಂಡುಗಳ ಕಾಲ ಉಸಿರು ಕಟ್ಟಲು ಸಾಧ್ಯವಾಯಿತು ಎಂದರೆ ನಿಮಗೆ ಸೋಂಕು ಇಲ್ಲ ಎಂದು ಅರ್ಥ.

  ವಾಸ್ತವಾಂಶ: ತಜ್ಞರ ಪ್ರಕಾರ, ಮಾಧ್ಯಮಗಳಲ್ಲಿ ಪ್ರಕಟವಾದ ಈ ಮಾಹಿತಿಯನ್ನು ಖಚಿತಪಡಿಸುವ ಯಾವುದೇ ಆಧಾರವಿಲ್ಲ. ಒಂದು ವೇಳೆ ಇದೇ ಪರೀಕ್ಷೆ ಸಾಕಾಗುತ್ತಿದ್ದಿದ್ದರೆ ವಿಶ್ವ ಸಂಸ್ಥೆಯಂತಹ ಜವಾಬ್ದಾರಿಯುತ ಸಂಸ್ಥೆ ಇದನ್ನು ತಿಳಿಸದೇ ಇರುತ್ತಿತ್ತೇ? ಆದರೆ ಯಾರಿಗೆ ಶ್ವಾಸಕೋಶದಲ್ಲಿ ಗಂಭೀರವಾದ ತೊಂದರೆ ಇದೆಯೋ ಆ ವ್ಯಕ್ತಿಗಳ ಶ್ವಾಸಕೋಶಗಳ ಕ್ಷಮತೆ ಕಂಡುಹಿಡಿಯಲು ಈ ವಿಧಾನವನ್ನು ಅನುಸರಿಸಲಾಗುತ್ತದೆ.


 • 18. ಮಿಥ್ಯೆ: ಸತತ ನೀರು ಕುಡಿಯುತ್ತಿರುವ ಮೂಲಕ ಕೋವಿಡ್-19 ಸೋಂಕು ಎದುರಾಗುವುದನ್ನು ತಪ್ಪಿಸಬಹುದು

  ವಾಸ್ತವಾಂಶ: ಸಾಮಾಜಿಕ ಜಾಲತಾಣದ ಒಂದು ಮಾಹಿತಿಯ ಪ್ರಕಾರ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ನೀರು ಕುಡಿಯುತ್ತಿದರೆ ಗಂಟಲಿನಲ್ಲಿದ್ದ ವೈರಸ್ಸು ನಿವಾರಣೆಯಾಗುತ್ತದೆ ಹಾಗೂ ಹೊಟ್ಟೆಯ ಪ್ರಬಲ ಆಮ್ಲಗಳು ಇದನ್ನು ಕೊಲ್ಲುತ್ತವೆ. ಆದರೆ ಈ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಆದರೂ ಆಗಾಗ ನೀರು ಕುಡಿಯುತ್ತಿರುವ ಅಭ್ಯಾಸ ರೂಢಿಸಿಕೊಂಡರೆ ದೇಹದ ಎಲ್ಲಾ ಕಾರ್ಯಗಳು ಸುಲಭವಾಗಿ ನೆರವೇರಲು ಸಾಧ್ಯವಾಗುತ್ತದೆ.


 • 19. ಮಿಥ್ಯೆ: ಉಪ್ಪುನೀರಿನ ಗಳಗಳ ಕೋವಿಡ್-19 ಸೋಂಕು ಎದುರಾಗುವುದನ್ನು ತಪ್ಪಿಸುತ್ತದೆ.

  ವಾಸ್ತವಾಂಶ: ಉಪ್ಪುನೀರು ಕೇವಲ ಬಾಯಿ ಮತ್ತು ಗಂಟಲ ಮೇಲ್ಭಾಗವನ್ನು ಸ್ವಚ್ಛಗೊಳಿಸುತ್ತವೆಯೇ ಹೊರತು ಗಂಟಲ ಒಳಭಾಗದಲ್ಲಿ ಅಲ್ಲ. ಕೆಲವು ಮಾಧ್ಯಮಗಳಲ್ಲಿ ಉಪ್ಪುನೀರಿನ ಬದಲು ಎಥನಾಲ್ ಅಥವಾ ಬಿಳಿಚುಕಾರಕ ದ್ರವವನ್ನು ಬಳಸಿ ಗಳಗಳ ಮಾಡಬೇಕೆಂದು ಸೂಚಿಸುತ್ತದೆ. ಆದರೆ ಇದು ಅಪಾಯಕಾರಿಯಾಗಿದೆ. ಕೆಲವು ಮಾಹಿತಿಗಳಲ್ಲಂತೂ ಬಿಸಿ ನೀರು ವೈರಸ್ಸುಗಳನ್ನು 'ತಟಸ್ಥ'ಗೊಳಿಸುತ್ತವೆ, ಹಾಗೂ ಐಸ್ ಕ್ರೀಮ್ ಮೊದಲಾದವುಗಳನ್ನು ತಿನ್ನುವುದನ್ನೂ ಬಿಟ್ಟರೆ ಸಾಕು ಎಂದು ಪ್ರಚಾರ ನೀಡುತ್ತಿವೆ. ಆದರೆ ಈ ಯಾವುದೇ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆಯಾಗಲೀ ಇತರ ಔಷಧಿ ಸಂಶೋಧಕರಾಗಲಿ ದೃಢೀಕರಿಸಿಲ್ಲ ಎಂದು ತಜ್ಞರು ವಿವರಿಸುತ್ತಾರೆ.


 • 20. ಮಿಥ್ಯೆ: ಬೆಳ್ಳಿಯನ್ನು ಕುಡಿದರೆ ಕೊರೋನಾ ವೈರಸ್ ಕೊಲ್ಲಲ್ಪಡುತ್ತವೆ

  ವಾಸ್ತವಾಂಶ: ಅಮೇರಿಕಾದ ಟೀವಿ ನಿರೂಪಕರೊಬ್ಬರು ತಪ್ಪಾಗಿ ಅರ್ಥೈಸಿಕೊಂಡು ತಮ್ಮದೇ ಆದ ಮಾಹಿತಿಯನ್ನು ಆಧರಿಸಿ ದ್ರವದಲ್ಲಿ ತೇಲುತ್ತಿರುವ ಲೋಹದ ಕಣಗಳನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಅರ್ಧ ದಿನದೊಳಗೇ ಈ ವೈರಸ್ ಸೋಂಕು ಇಲ್ಲವಾಗುತ್ತದೆ. ಆದರೆ ಈ ಮಾಹಿತಿಯನ್ನು ಯಾವುದೇ ಸಂಶೋಧನೆ ಸಾಬೀತುಗೊಳಿಸಿಲ್ಲ. ಬದಲಿಗೆ ಬೆಳ್ಳಿಯ ಸೇವನೆ ಮೂತ್ರಪಿಂಡಗಳಿಗೆ ಹಾನಿ ಎಸಗಬಹುದು ಹಾಗೂ ದೇಹಕ್ಕೆ ಪಾರ್ಶ್ವವಾಯುವೂ ಎದುರಾಗಬಹುದು. ನಮ್ಮ ದೇಹಕ್ಕೆ ಬೆಳ್ಳಿ ಮತ್ತು ಸತು ಮೊದಲಾದ ಖನಿಜಗಳು ಬೇಕೇ ವಿನಃ ಬೆಳ್ಳಿ, ಬಂಗಾರದಂತಹ ಖನಿಜಗಳ ಅಗತ್ಯವಿಲ್ಲ.


 • 21. ಮಿಥ್ಯೆ: ಬಿಸಿಲು ಅಥವಾ ಸೆಖೆಯಲ್ಲಿ ಕೊರೋನಾ ವೈರಸ್ ಉಳಿಯುವುದಿಲ್ಲ

  ವಾಸ್ತವಾಂಶ: ಈ ವರೆಗೆ ಕೊರೋನಾ ವೈರಸ್ ಬಗ್ಗೆ ಲಭಿಸಿರುವ ಮಾಹಿತಿಯ ಪ್ರಕಾರ, ತಜ್ಞರಿಗೆ ಈ ವೈರಸ್ ಬಿಸಿಲು ಮತ್ತು ಸೆಖೆಗಾಲದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಹೇಳಲು ಸಾಧ್ಯವಾಗಿಲ್ಲ. ಆದರೆ ಇದಕ್ಕೂ ಮೊದಲು ಎದುರಾಗಿದ್ದ ಸಾರ್ಸ್ ಮತ್ತು ಮರ್ಸ್ ರೋಗಗಳ ವ್ಯಾಪಿಸುವಿಕೆಯ ಮಾಹಿತಿಗಳಲ್ಲಿನೆ ಸಮಾನ ಅಂಶಗಳನೇ ಈ ವೈರಸ್ಸಿಗೂ ಅನ್ವಯಿಸಿ ಹೇಳಲಾಗುತ್ತದೆ. ಆದರೆ ಈಗ ಸೆಖೆಗಾಲವಾಗಿರುವ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಮೊದಲಾದ ರಾಷ್ಟ್ರಗಳಲ್ಲಿಯೂ ಈ ಸೋಂಕು ಕಂಡುಬಂದಿದೆ. ಹಾರ್ವರ್ಡ್ ವೈದ್ಯಕೀಯ ಸಂಸ್ಥೆಯ ಸಂಶೋಧನೆಯ ಪ್ರಕಾರ ಚೀನಾದಲ್ಲಿಯೇ ವಿವಿಧ ತಾಪಮಾನ ಮತ್ತು ಆದ್ರತೆ ಇದ್ದಾಗಲೂ ಈ ವೈರಸ್ ಆ ಪ್ರದೇಶಗಳಿಗೂ ಹರಡಿದೆ.


 • 22. ಮಿಥ್ಯೆ: ಸಾಮಾನ್ಯ ಶೀತ ಎದುರಾಗುವ ಋತುಮಾನಕ್ಕಿಂತ ಹೆಚ್ಚೇನೂ ಈ ವೈರಸ್ ಬಾಧಿಸುವುದಿಲ್ಲ

  ವಾಸ್ತವಾಂಶ: ಇದುವರೆಗೆ ಎದುರಾಗುವ ಸೋಂಕು ಪ್ರಕರಣಗಳೆಲ್ಲವೂ ಈ ಸೋಂಕು ಅಲ್ಪ ಮಟ್ಟದ್ದಾಗಿದೆ ಹಾಗೂ ಇವು ಸಾಮಾನ್ಯ ಫ್ಲೂ ನಂತಹ ಲಕ್ಷಣಗಳನ್ನೇ ತೋರುತ್ತವೆ. ಆದರೆ ಸಾಮಾನ್ಯ ಫ್ಲೂ ಎದುರಾದರೆ ರೋಗಿ ಸಾವಿಗೀಡಾಗುವ ಸಾಧ್ಯತೆ ನೂರಕ್ಕೆ ಒಂದು ಇದ್ದರೆ ಕೋವಿಡ್ -19 ಸೋಂಕು ಎದುರಾದರೆ ಸಾಮಾನ್ಯ ಫ್ಲೂ ಗಿಂತಲೂ ಹತ್ತು ಪಟ್ಟು ಹೆಚ್ಚು ಸಂಖ್ಯೆಯ ಜನರಿಗೆ ಎದುರಾಗಬಹುದು.
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಜಗತ್ತೇ ಕ್ರಮ ಕೈಗೊಳ್ಳುತ್ತಿದ್ದು ಹಿಂದೆಂದೂ ಇಲ್ಲದಷ್ಟು ಜಗತ್ತು ಸ್ತಬ್ಧಗೊಂಡಿದೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನೂರಾರು ಸಂಗತಿಗಳಲ್ಲಿ ಕೆಲವು ಮಾತ್ರವೇ ನಂಬಲರ್ಹ ಮೂಲದಿಂದ ಬಂದಿವೆ ಹಾಗೂ ಅಧಿಕೃತ ಪ್ರಕಟಣೆಯ ಮಾಹಿತಿಯನ್ನೇ ಸತ್ಯ ಎಂದು ಪರಿಗಣಿಸುವುದು ಅಗತ್ಯ.

ಮಾಧ್ಯಮದಲ್ಲಿ ನಮಗೆ ತಿಳಿದಿರುವವರು ಯಾರೋ ಫಾರ್ವರ್ಡ್ ಮಾಡಿದರು ಎಂದಾಕ್ಷಣ ಅದು ಸತ್ಯವಾಗಿರುವ ಮಾಹಿತಿಯಾಗಿರಬೇಕಿಲ್ಲ. ಇಂಥ ಹಲವಾರು ಮಿಥ್ಯಾಸಂಗತಿಗಳನ್ನು ಇಂದಿನ ಲೇಖನದಲ್ಲಿ ಸಂಗ್ರಹಿಸಿ ನೀಡಲಾಗಿದೆ.

 
ಟೆಕ್ನಾಲಜಿ