Back
Home » ಆರೋಗ್ಯ
ಈ ಸಲಹೆಗಳನ್ನು ಪಾಲಿಸಿದರೆ ಈ ವರ್ಷ ನಿಮ್ಮ ತೂಕ ಖಂಡಿತ ಇಳಿಯಲಿದೆ
Boldsky | 7th Jan, 2020 11:26 AM
 • 1. ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ಸೇವಿಸಿ

  ತೂಕ ಇಳಿಸಲು ನೆರವಾಗುವ ಆಹಾರ ಕ್ರಮಗಳನ್ನು ಹುಡುಕಿದರೆ ನೂರಾರು ಸಿಗಬಹುದು. ಆದರೆ ತೂಕ ಇಳಿಕೆಗೆ ಸೂಕ್ತವಾದ ಆಹಾರಕ್ರಮವನ್ನು ಆಯ್ದುಕೊಳ್ಳುವುದು ಅಗತ್ಯ. ಇದಕ್ಕಾಗಿ ಅಸಾಂಪ್ರಾದಾಯಿಕ ಆಹಾರಕ್ರಮವನ್ನು ಆಯ್ದುಕೊಳ್ಳಬಹುದು. ಅಂದರೆ ಇವುಗಳಲ್ಲಿ ಇತರ ಅಹಾರಗಳಲ್ಲಿದ್ದಷ್ಟು ಪೌಷ್ಟಿಕಾಂಶಗಳು ಮತ್ತು ಸಕ್ಕರೆ ಇರುವುದಿಲ್ಲ, ಆದರೆ ದಿನದ ಸಾಮಾನ್ಯ ಚಟುವಟಿಕೆಗೆ ಅಗತ್ಯವಿರುವಷ್ಟು ಪೋಷಕಾಂಶಗಳು ಮಾತ್ರವೇ ಇರುತ್ತವೆ. ಇವುಗಳ ಸೇವನೆಯನ್ನು ಪ್ರಾರಂಭಿಸಿದ ಬಳಿಕ ಶೀಘ್ರವೇ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಹಾಗಾಗಿ, ಯಾರೋ ಹೇಳಿದರು ಎಂದು ಯಾವುದೋ ಆಹಾರಕ್ರಮ ಅನುಸರಿಸದೇ ಮಿತಪ್ರಮಾಣದ ಕ್ಯಾಲೋರಿಗಳಿರುವ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ನಿತ್ಯದ ಕಾರ್ಯಗಳನ್ನು ಏನೂ ತೊಂದರೆಯಾಗದಂತೆ ನಿರ್ವಹಿಸಲು ಸಾಧ್ಯವಾಗುತ್ತದೆ.


 • 2. ಸಾಧ್ಯವಾಗುವಂತಹ ಗುರಿಗಳನ್ನೇ ನಿರ್ಧರಿಸಿ

  ತೂಕ ಇಳಿಕೆಗೂ ಸಮಯಾವಕಾಶ ಬೇಕು. ಈಗ ನಿಮಗೆ ಸ್ಥೂಲಕಾಯ ಬಂದಿದೆ ಎಂದರೆ ಇದೇನೂ ಒಂದೇ ದಿನದಲ್ಲಿ ಬಂದಿರಲಿಕ್ಕಿಲ್ಲ. ಇದೂ ಕೆಲವಾರು ವರ್ಷಗಳಿಂದಲೇ ನಿಧಾನವಾಗಿ ಏರುತ್ತಿದ್ದಿರಬಹುದು. ಹಾಗಾಗಿ ತೂಕ ಇಳಿಸುವ ಪ್ರಕ್ರಿಯೆಯೂ ನಿಧಾನವೇ ಆಗಿರುತ್ತದೆ. ಹಾಗಾಗಿ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮತ್ತು ಆಹಾರಕ್ರಮವನ್ನು ಪರಿಗಣಿಸಿ ಸಾಕಷ್ಟು ಕಾಲಾವಕಾಶ ನೀಡಬೇಕಾಗುತ್ತದೆ. ಸರಳವಾದ ಗಣಿತ ಸೂತ್ರವನ್ನು ಇಲ್ಲಿ ಬಳಸಬಹುದು. ಮಾರಾಟಬೆಲೆಯಿಂದ ಅಸಲು ಕಳೆದಾಗ ಬರುವ ಮೊತ್ತ ಧನವಾಗಿದ್ದರೆ ಲಾಭ ಕಳೆ ಇದ್ದರೆ ನಷ್ಟ. ಹಾಗಾಗಿ ನಾವು ಸೇವಿಸುವ ಒಟ್ಟು ಕ್ಯಾಲೋರಿಗಳು ಅಸಲಾದರೆ ಇದನ್ನು ನಿಮ್ಮ ಚಟುವಟಿಕೆಗಳಿಂದ ದಹಿಸಿಕೊಳ್ಳುವುದು ಮಾರಾಟ. ಸೇವನೆಗಿಂತಲೂ ಕಡಿಮೆ ಹದಿಸಲ್ಪಟ್ಟರೆ ತೂಕದಲ್ಲಿ ಏರಿಕೆ, ಹೆಚ್ಚು ದಹಿಸಲ್ಪಟ್ಟರೆ ತೂಕದಲ್ಲಿ ಇಳಿಕೆ. ಇದು ಅರ್ಥವಾದರೆ ನಿಮಗೆ ಎಷ್ಟು ಸಮಯ ಬೇಕಾಗುತ್ತದೆ ಎಂದು ನಿಮಗೇ ಅರ್ಥವಾಗುತ್ತದೆ. ಆ ಪ್ರಕಾರ ನಿಮ್ಮ ಗುರಿಗಳನ್ನು ನಿರ್ಧರಿಸಿ ಹಾಗೂ ಈ ಗುರಿಯನ್ನು ತಲುಪಲು ಕ್ರಮಿಸಬೇಕಾದ ಹಾದಿಯನ್ನು ಕ್ರಮ ತಪ್ಪದೇ ನಿತ್ಯವೂ ಅನುಸರಿಸಿ. ಈ ಮೂಲಕ ನಿಮ್ಮ ಗುರಿಯನ್ನು ಸಾಧಿಸುವ ಛಲ ನಿಮ್ಮಲ್ಲಿ ದಿನಗಳೆದಂತೆ ಹುಮ್ಮಸ್ಸನ್ನು ಹೆಚ್ಚಿಸುತ್ತದೆ.


 • 3. ನಿಮ್ಮ ಜೀವ ರಾಸಾಯನಿಕ ಕ್ರಿಯೆಯನ್ನು ಗಮನಿಸಿ

  ತೂಕ ಇಳಿಕೆಗೆ ಜೀವ ರಾಸಾಯನಿಕ ಕ್ರಿಯೆಯ ಪ್ರಭಾವ ಪ್ರಮುಖವಾಗಿದೆ. ಆರೋಗ್ಯಕರ ಮತ್ತು ಸಮತೋಲನದಲ್ಲಿ ನಡೆಯುವ ಜೀವರಾಸಾಯನಿಕ ಕ್ರಿಯೆ ಆರೋಗ್ಯಕರ ತೂಕ ಇಳಿಕೆಗೆ ನೆರವಾಗುತ್ತದೆ. ಒಂದು ವೇಳೆ ಇದು ಸಮರ್ಪಕವಾಗಿಲ್ಲದಿದ್ದರೆ ತೂಕ ಇಳಿಕೆ ಕಷ್ಟಕರವಾಗಬಹುದು. ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಲು ಅಗತ್ಯವಿರುವ ಯಾವುದೇ ಕ್ರಮವನ್ನು ನೀವು ಅನುಸರಿಸಬಹುದು. ಈ ಮೂಲಕ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಿಕೊಳ್ಳಬಹುದು.
  ಇದಕ್ಕೆ ನೆರವಾಗುವ ಕೆಲವು ವಿಧಾನಗಳೆಂದರೆ:
  * ಪ್ರತಿ ಊಟದಲ್ಲಿಯೂ ಸಾಕಷ್ಟು ಪ್ರೋಟೀನ್ ಸೇವಿಸುವುದು
  * ಹೆಚ್ಚು ಹೆಚ್ಚು ತಣ್ಣೀರನ್ನು ಕುಡಿಯುವುದು
  * ಹೆಚ್ಚಿನ ಶ್ರಮದಾಯಕ ವ್ಯಾಯಾಮಗಳನ್ನು ಮಾಡುವುದು
  * ಭಾರದ ವಸ್ತುಗಳನ್ನು ಎತ್ತುವುದು
  * ಹೆಚ್ಚು ಹೊತ್ತು ನಿಂತುಕೊಂಡಿರುವುದು
  * ಹಸಿರು ಟೀ ಅಥವಾ ಊಲಾಂಗ್ ಟೀ ಸೇವನೆ
  * ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದು
  * ಸಾಕಷ್ಟು ಪ್ರಮಾಣದ ಗಾಢನಿದ್ದೆ ಪಡೆಯುವುದು.


 • 4. ಸಾಕಷ್ಟು ಪ್ರಮಾಣದ ನಿದ್ದೆ ಪಡೆಯಿರಿ

  ಆರೋಗ್ಯಕರ ಜೀವನಕ್ರಮದಲ್ಲಿ ಪೌಷ್ಟಿಕ ಆಹಾರ ಸೇವನೆಯ ಜೊತೆಗೇ ಸಾಕಷ್ಟು ನಿದ್ದೆಯನ್ನು ಪಡೆಯುವುದೂ ಅವಶ್ಯವಾಗಿದೆ. ಅಸಮರ್ಪಕ ಜೀವನ ಕ್ರಮ, ಸರಿಯಾದ ಸಮಯದಲ್ಲಿ ಆಹಾರ ಸೇವಿಸದಿರುವುದು, ವ್ಯಾಯಾಮದ ಕೊರತೆ ಮೊದಲಾದವು ಕೇವಲ ಸ್ಥೂಲಕಾಯ ಹೆಚ್ಚಿಸುವುದು ಮಾತ್ರವಲ್ಲ, ಕೆಲವಾರು ಕಾಯಿಲೆಗಳು ಸಂಭವಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ನಿದ್ರಾರಾಹಿತ್ಯ ಕೆಲವು ಪರೋಕ್ಷ ಕಾಯಿಲೆಗಳಿಗೂ ಕಾರಣವಾಗಬಹುದು. ವಯಸ್ಕರಿಗೆ ಕನಿಷ್ಟ ಆರು ಘಂಟೆಗಳ ಗಾಢ ನಿದ್ದೆ ಅಗತ್ಯ. ಅಂದರೆ ಪವಡಿಸಿದ ಬಳಿಕ ನಿದ್ದೆ ಆವರಿಸಿ ಎಚ್ಚರಾಗುವ ವರೆಗಿನ ಅವಧಿ ಆರು ಘಂಟೆಗಳಾದರೂ ಇರಬೇಕು. ಇಷ್ಟು ಪ್ರಮಾಣದ ಗಾಢ ನಿದ್ದೆ ಪಡೆದಾಗಲೇ ದೇಹದ ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯಲು ಸಾಧ್ಯ. ನಿದ್ದೆಯ ಗುಣಮಟ್ಟ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ತೂಕದ ನಿರ್ವಹಣೆ ಮತ್ತು ಎಚ್ಚರಿದ್ದಷ್ಟೂ ಸಮಯದಲ್ಲಿ ಮಾಡುವ ಕೆಲಸದ ಮೇಲೂ ಪ್ರಭಾವ ಬೀರುತ್ತದೆ. ಸರಿಯಾದ ಕ್ರಮದಲ್ಲಿ ನಿದ್ರಿಸದೇ ಅಥವಾ ನಿದ್ರಿಸಬಾರದ ಸಮಯದಲ್ಲಿ ನಿದ್ರಿಸಿ, ನಿದ್ರಿಸುವ ಸಮಯದಲ್ಲಿ ಎಚ್ಚರಿರುವ ಮೂಲಕ ದೇಹದ ಜೈವಿಕ ಗಡಿಯಾರದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುವುದರಿಂದ ತೂಕ ಇಳಿಕೆಯ ಗುರಿಗಳು ಸಾಧ್ಯವಾಗದೇ ಹೋಗಬಹುದು.


 • 5. ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳಿ

  ನೀರು ಕುಡಿಯುವ ಮಹತ್ವದ ಬಗ್ಗೆ ನಾವೆಲ್ಲಾ ಅರಿತೇ ಇದ್ದೇವೆ. ಸಾಮಾನ್ಯ ನಂಬಿಕೆಯ ಪ್ರಕಾರ, ದಿನಕ್ಕೆ ಏಳರಿಂದ ಎಂಟು ಲೋಟ ನೀರು ಕುಡಿಯಬೇಕು. ಈ ಮೂಲಕ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಗಟ್ಟಬಹುದು. ಆದರೆ ದಿನಕ್ಕೆ ಎಂಟು ಲೋಟ ಎಂದರೆ ಯಾವ ಹೊತ್ತಿಗೆ ಎಷ್ಟು ಲೋಟ ಎಂಬ ಮಾಹಿತಿಯನ್ನು ಯಾರೂ ಸರಿಯಾಗಿ ನೀಡುವುದಿಲ್ಲ. ನಿಮ್ಮ ದೇಹಕ್ಕೆ ಸತತವಾಗಿ ನೀರಿನ ಪೂರೈಕೆ ಆಗುತ್ತಿರಬೇಕು. ಹಾಗಾಗಿ ನೀರು ಕುಡಿಯುವುದೂ ಸತತವಾಗಿರಬೇಕು. ಒಂದು ಅಧ್ಯಯನದ ಪ್ರಕಾರ ಪ್ರತಿ ಘಂಟೆಗೊಮ್ಮೆ ಅರ್ಧ ಲೋಟ ನೀರು ಕುಡಿಯುತ್ತಿರಬೇಕು ಮತ್ತು ಎರಡು ಘಂಟೆಗಳಿಗೊಮ್ಮೆ ಮೂತ್ರ ವಿಸರ್ಜನೆಗೆ ಹೋಗಬೇಕು. ಹೀಗೆ ಮಾಡುವ ಮೂಲಕ ದೇಹದಲ್ಲಿ ಸಾಕಷ್ಟು ನೀರಿನಂಶದ ದಾಸ್ತಾನನ್ನು ಇರಿಸಿಕೊಳ್ಳುತ್ತದೆ ಹಾಗೂ ಕಲ್ಮಶಗಳನ್ನು ಪರಿಪೂರ್ಣವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಈ ನೀರು ಕೊಂಚ ಉಗುರು ಬೆಚ್ಚಗಿದ್ದರೆ ಇನ್ನೂ ಒಳ್ಳೆಯದು. ಈ ನೀರನ್ನು ತಣಿಸಲು ದೇಹ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ತನ್ಮೂಲಕ ತೂಕ ಇಳಿಕೆ ಇನ್ನಷ್ಟು ಶೀಘ್ರವಾಗುತ್ತದೆ.


 • ಇವುಗಳ ಹೊರತಾಗಿ ತೂಕ ಇಳಿಸಿಕೊಳ್ಳುವವರು ಗಮನದಲ್ಲಿರಿಸಿಕೊಳ್ಳಬೇಕಾದ ಅಂಶಗಳೆಂದರೆ:

  * ನಿಮ್ಮ ಕುಟುಂಬ ಸದಸ್ಯರ ಹಾಗೂ ಸ್ನೇಹಿತರ ಸಲಹೆ ಪಡೆಯಿರಿ
  * ನಿಮ್ಮ ಆಹಾರದಲ್ಲಿ ಸಾಕಷ್ಟು ನಾರಿನಂಶ ಇರಲಿ
  * ಭಾವೋದ್ವೇಗ ಪರಿಣಾಮವಾಗಿ ಹೆಚ್ಚು ತಿನ್ನದಿರಿ
  * ನಿಮಗೆ ಇಷ್ಟವಾಗುವಂತಹ ಆಹಾರಗಳನ್ನು ಸೇವಿಸಿ, ಅಥವಾ ನೀವು ಸೇವಿಸಬೇಕಾದ ಆಹಾರಗಳನ್ನು ಪ್ರೀತಿಸಿ
  * ನಿಮ್ಮ ಗುರಿ ತಲುಪುವವರೆಗೂ ಧನಾತ್ಮಕ ಧೋರಣೆಯನ್ನೇ ತಳೆಯಿರಿ


 • 2020ರಲ್ಲಿ ನಿಮ್ಮ ಕನಸು ಸಾಕಾರಗೊಳ್ಳಲಿ

  ನಿಮ್ಮ ದೇಹ ಪ್ರಕೃತಿಗೆ ಸೂಕ್ತವಾಗುವಂತಹ ಆಹಾರಕ್ರಮ, ವ್ಯಾಯಾಮ ಹಾಗೂ ಜೀವನಕ್ರಮಗಳ ಬಗ್ಗೆ ತಜ್ಞರು ಅಥವಾ ನಿಮ್ಮ ಕುಟುಂಬ ವೈದ್ಯರಿಂದ ಸಲಹೆ ಪಡೆಯಿರಿ. ಇದಕ್ಕಾಗಿ ಸಮರ್ಪಕವಾದ ಕ್ರಮವನ್ನು ನೀವು ತಪ್ಪದೇ ಅನುಸರಿಸಬೇಕು ಹಾಗೂ ಆರಂಭಶೂರತನ ತೊರೆದು ಮುನ್ನಡೆಯಿರಿ. ಸದಾ ಆಹಾರತಜ್ಞರು, ಕುಟುಂಬ ವೈದ್ಯರು ಹಾಗೂ ವ್ಯಾಯಾಮ ತರಬೇತುದಾರರು ನೀಡಿದ ಸಲಹೆಯ ಪ್ರಕಾರವೇ ನಿಮ್ಮ ಆಹಾರ ಮತ್ತು ವ್ಯಾಯಾಮಕ್ರಮಗಳನ್ನು ಅನುಸರಿಸಿ. ಸಾಮಾನ್ಯವಾಗಿ ನಿಮ್ಮ ಗುರಿಗಳು ಪ್ರಾರಂಭಿಕ ದಿನಗಳಲ್ಲಿ ನೀವು ಅಂದುಕೊಂಡಿದಂತೆ ನಡೆಯದೇ ಇರಬಹುದು. ಆದರೆ ದೃತಿಗೆಡದಿರಿ, ನಿಮ್ಮ ಗುರಿಯನ್ನು ಸಾಧಿಸಲು ಮುನ್ನಡೆಯಿರಿ. ಈ 2020 ರ ಹೊಸವರ್ಷ ನಿಮ್ಮ ತೂಕ ಇಳಿಕೆಯ ಕನಸುಗಳನ್ನು ಸಾಕಾರಗೊಳಿಸಲಿ.


 • ತಪ್ಪು ಕಲ್ಪನೆ ಬೇಡ

  ಅತಿ ಸಾಮಾನ್ಯವಾದ ತಪ್ಪು ಕಲ್ಪನೆ ಎಂದರೆ ತೂಕ ಇಳಿಸಬೇಕೆಂದರೆ ಊಟ ಬಿಡಬೇಕು ಎನ್ನುವುದು. ಹೀಗೆ ಮಾಡಿದರೆ ತೂಕ ಇಳಿಯುವ ಬದಲು ಸ್ವಾಸ್ಥ್ಯವೇ ಇಳಿಯುತ್ತದೆ. ಆದ್ದರಿಂದ ಇದನ್ನು ಸೂಕ್ತ ರೀತಿಯಲ್ಲಿ ಮತ್ತು ಕ್ರಮದಲ್ಲಿಯೇ ಇಳಿಸಲು ಸೂಕ್ತ ಆಹಾರಕ್ರಮ, ಸಾಕಷ್ಟು ವ್ಯಾಯಾಮ ಮತ್ತು ಹೆಚ್ಚುವರಿ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಅನುಕೂಲತೆಯ ಪ್ರಕಾರ ತೂಕ ಇಳಿಸಿಕೊಳ್ಳಲು ಈ ವಿಧಾನಗಳನ್ನು ಮಾರ್ಪಾಡಿಸಿಕೊಳ್ಳಬಹುದಾಗಿದೆ. ಸ್ಥೂಲದೇಹವಿದ್ದರೆ ಅನಾರೋಗ್ಯ ವ್ಯಕ್ತಿಗಳು ಎಂದರ್ಥವಲ್ಲ. ಅಂತೆಯೇ ಕೃಶಶರೀರವಿದ್ದಾಕ್ಷಣ ಆರೋಗ್ಯವಂತರೂ ಆಗಿರಬೇಕಿಲ್ಲ.

  ತಜ್ಞರ ಪ್ರಕಾರ ತೂಕ ಇಳಿಕೆಯಲ್ಲಿ ಮೂರು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ: ಈಗಿರುವ ತೂಕ, ನಿಮ್ಮ ಎತ್ತರಕ್ಕೆ ತಕ್ಕಂತೆ ಇರಬೇಕಾದ ತೂಕ (ಬಿ ಎಂ ಐ ಅಥವಾ ಬಾಡಿ ಮಾಸ್ ಇಂಡೆಕ್ಸ್) ಮತ್ತು ಸೊಂಟದ ಸುತ್ತಳತೆ (ಕೊಬ್ಬಿನ ಸಂಗ್ರಹ ದೇಹದ ಗುರುತ್ವಕೇಂದ್ರದತ್ತಲೇ ಇರಬೇಕಾಗುತ್ತದೆ, ಇಲ್ಲದಿದ್ದರೆ ದೇಹಕ್ಕೆ ಸಮತೋಲನ ಸಾಧಿಸಲು ಸಾಧ್ಯವಿಲ್ಲ . ಇದೇ ಕಾರಣಕ್ಕೆ ಸೊಂಟದಲ್ಲಿಯೇ ಹೆಚ್ಚು ಕೊಬ್ಬು ತುಂಬಿಕೊಳ್ಳುತ್ತದೆ)

  ತೂಕ ಇಳಿಸುವುದು ಎಷ್ಟಾಗಬೇಕು ಮತ್ತು ಎಷ್ಟು ಸಮಯದಲ್ಲಿ ಸಾಧಿಸಬೇಕು ಎಂಬ ಗುರಿಗಳನ್ನು ನಿರ್ಧರಿಸಿ ಈ ನಿಟ್ಟಿನಲ್ಲಿ ಮಾನಸಿಕರಾಗಿ ತಯಾರಾಗುವುದು ಮುಖ್ಯ ಹಾಗೂ ಈ ಕ್ರಮವನ್ನು ತಪ್ಪದೇ ಅನುಸರಿಸುವುದು ಇನ್ನೂ ಮುಖ್ಯ. ಈ ಪ್ರಕಾರ ಮುಂದುವರೆಯುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಹೊಸ ವರ್ಷದ ನಿಮಿತ್ತ ಬೋಲ್ಡ್ ಸ್ಕೈ ನಿಮಗಾಗಿ ತೂಕ ಇಳಿಸುವ ಕಕೆಲವು ಪ್ರಮುಖ ಸಲಹೆಗಳನ್ನು ನೀಡಲಿದ್ದೇವೆ, ಯಾವುವು, ಹೇಗೆಲ್ಲಾ ಮಾಡಬಹುದು ಬನ್ನಿ ನೋಡೋಣ:
ಒಂದು ಕಾಲದಲ್ಲಿ ಸ್ಥೂಲಕಾಯವನ್ನು ಆರೋಗ್ಯವಂತರು ಮತ್ತು ಉಳ್ಳವರು ಎಂಬ ಅರ್ಥದಲ್ಲಿ ಪರಿಗಣಿಸಲಾಗುತ್ತಿತ್ತು. ಆದರೆ ಸ್ಥೂಲದೇಹದಿಂದ ಎದುರಾಗುವ ಅನಾರೋಗ್ಯಗಳ ಸಂಭವ ಹೆಚ್ಚುತ್ತಿದ್ದಂತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದ್ದಂತೆಯೇ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಗೆ ಇಂದು ಹೆಚ್ಚಿನ ಚಾಲನೆ ಸಿಕ್ಕಿದೆ. ಪರಿಣಾಮವಾಗಿ ವಿಶ್ವದಲ್ಲಿ ಸುಮಾರು ಶೇಕಡಾ ಇಪ್ಪತ್ತರಷ್ಟು ವ್ಯಕ್ತಿಗಳು ಇಂದು ತಮ್ಮ ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ. ವಾಸ್ತವದಲ್ಲಿ ತೂಕ ಕಳೆದುಕೊಳ್ಳುವುದು ಅನಾರೋಗ್ಯವಲ್ಲವಾದರೂ ಸರಿಯಾದ ಕ್ರಮದಲ್ಲಿ ಅನುಸರಿಸದೇ ಇದ್ದರೆ ಮಾತ್ರ ಅನಾರೋಗ್ಯಕ್ಕೂ ಅನಾಹುತಕ್ಕೂ ಕಾರಣವಾಗಬಹುದು.

 
ಟೆಕ್ನಾಲಜಿ