ಎಕೋ ಸಾಧನಗಳಲ್ಲಿ ಅಲೆಕ್ಸಾ ಬಳಕೆದಾರರಿಗಾಗಿ ಅಮೆಜಾನ್ ತನ್ನ ಸಂಗೀತ ಸೇವೆಯ ಉಚಿತ ಆವೃತ್ತಿಯನ್ನು ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಿತು. ಈಗ ಆ ಸೇವೆಯನ್ನು ಅಪ್ಲಿಕೇಶನ್ಗೂ ವಿಸ್ತರಿಸಿದ್ದು, ಸುಮಾರು 140 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಸ್ಪೂಟಿಫೈ ಟೆಕ್ನಾಲಜಿಗೆ ಸ್ಪರ್ಧೆ ನೀಡಲಿದೆ.
ತನ್ನ ಬ್ಲಾಗ್ ಪೋಸ್ಟ್ನಲ್ಲಿ ಉಚಿತ ಆವೃತ್ತಿಯನ್ನು ಪರಿಚಯಿಸಿರುವ ಅಮೆಜಾನ್, ಪ್ರೈಮ್ ಸದಸ್ಯತ್ವ ಮತ್ತು ಅಮೆಜಾನ್ ಮ್ಯೂಸಿಕ್ ಅನ್ಲಿಮಿಟೆಡ್ನ ಚಂದಾದಾರಿಕೆ ಹೊಂದಿರದ ಅಮೆಜಾನ್ ಮ್ಯೂಸಿಕ್ ಗ್ರಾಹಕರು ಈಗ ಜಾಹೀರಾತು-ಬೆಂಬಲಿತ ಉನ್ನತ ಪ್ಲೇಲಿಸ್ಟ್ಗಳ ಮೂಲಕ ಹಾಡುಗಳನ್ನು ಕೇಳಬಹುದು ಎಂದಿದೆ. ತಮ್ಮ ನೆಚ್ಚಿನ ಸಾಧನಗಳಲ್ಲಿ ಸಾವಿರಾರು ಸ್ಟೇಷನ್ಗಳು ಉಚಿತವಾಗಿ ಲಭ್ಯವಿದ್ದು, ಐಒಎಸ್, ಆಂಡ್ರಾಯ್ಡ್ ಮತ್ತು ಫೈರ್ಟಿವಿಗಳಲ್ಲಿ ಅಮೆಜಾನ್ ಮ್ಯೂಸಿಕ್ ಅಪ್ಲಿಕೇಶನ್ ಬಳಸುವ ಗ್ರಾಹಕರಿಗೆ ಸೇವೆಯನ್ನು ವಿಸ್ತರಿಸುತ್ತದೆ.
ಅಮೆಜಾನ್ ಮ್ಯೂಸಿಕ್ ಮೂಲಕ ವೆಬ್ನಲ್ಲಿಯೂ ಗ್ರಾಹಕರು ಸಂಗೀತವನ್ನು ಆಲಿಸಬಹುದಾಗಿದೆ. ಈಗ, ಯುಎಸ್, ಯುಕೆ ಮತ್ತು ಜರ್ಮನಿಯ ಗ್ರಾಹಕರು ಯಾವುದೇ ಚಂದಾದಾರಿಕೆ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದೆಯೇ ಹೆಚ್ಚಿನ ಸಂಗೀತ ಆನಂದಿಸಲು ಸಾಧ್ಯವಾಗುತ್ತದೆ ಎಂದು ಅಮೆಜಾನ್ ಹೇಳಿದೆ.
ಆದಾಗ್ಯೂ, ಗ್ರಾಹಕರು ಜಾಹೀರಾತು-ಮುಕ್ತ ಸಂಗೀತ ಆಲಿಸಲು ಬಯಸಿದರೆ, ಅವರು ಪ್ರೈಮ್ ಚಂದಾದಾರಿಕೆ ಅಥವಾ ಅಮೆಜಾನ್ ಮ್ಯೂಸಿಕ್ ಅನ್ಲಿಮಿಟೆಡ್ ಚಂದಾದಾರಿಕೆ ಹೊಂದುವುದು ಅಗತ್ಯವಾಗಿರುತ್ತದೆ. ಇ-ಕಾಮರ್ಸ್ ದೈತ್ಯ ನೀಡುವ ಇತರ ಅಸಂಖ್ಯಾತ ಸೇವೆಗಳಲ್ಲಿ ಅಮೆಜಾನ್ ಪ್ರೈಮ್, ಪ್ರೈಮ್ ವಿಡಿಯೋ ಮತ್ತು ಅಮೆಜಾನ್ ಮ್ಯೂಸಿಕ್ ಒಳಗೊಂಡಿರುವ ಪ್ರೈಮ್ ಚಂದಾದಾರಿಕೆ ಭಾರತದಲ್ಲಿ ವಾರ್ಷಿಕ 999 ರೂ. ಅಥವಾ ಮಾಸಿಕ 129 ರೂ. ಆಗಿದೆ.
ಪ್ರಮುಖ ಇ-ಕಾಮರ್ಸ್ ತಾಣ ಅಮೆಜಾನ್ ತನ್ನ ಸಂಗೀತ ಆಪ್ ಸೇವೆಯನ್ನು ಜಾಹೀರಾತುಗಳೊಂದಿಗೆ ಉಚಿತವಾಗಿ ನೀಡಲು ಮುಂದಾಗಿದೆ. ಪ್ರೈಮ್ ಅಥವಾ ಅಮೆಜಾನ್ ಮ್ಯೂಸಿಕ್ ಅನ್ಲಿಮಿಟೆಡ್ ಚಂದಾದಾರಿಕೆಯನ್ನು ಹೊಂದಿರದ ಗ್ರಾಹಕರಿಗೆ ಅಮೆಜಾನ್ ಮ್ಯೂಸಿಕ್ ಲಭ್ಯವಾಗಲಿದೆ. ಈ ಮೊದಲು, ಅಮೆಜಾನ್ ಮ್ಯೂಸಿಕ್ ಸೇವೆಗಾಗಿ ತನ್ನ ಗ್ರಾಹಕರಿಗೆ ತಿಂಗಳಿಗೆ 9.99 ಡಾಲರ್ ಶುಲ್ಕವನ್ನು ವಿಧಿಸುತ್ತಿತ್ತು. ಅಮೆಜಾನ್ ಪ್ರೈಮ್ನಲ್ಲಿನ ಬಂಡಲ್ ಸೇವೆಯಾಗಿಯೂ ಕೂಡ ಮ್ಯೂಸಿಕ್ ಬಳಕೆದಾರರಿಗೆ ಲಭ್ಯವಿತ್ತು.