Back
Home » ಸುದ್ದಿ
ದೊಡ್ಡವರ ಪ್ರತಿಷ್ಠೆ; ಕುವೆಂಪು ವಿವಿ ನೌಕರರಿಗೆ ಸಂಕಟ
Oneindia | 23rd Oct, 2019 12:25 PM

ಶಿವಮೊಗ್ಗ, ಅಕ್ಟೋಬರ್ 23 : ಹಚ್ಚ ಹಸಿರಿನ ವನಸಿರಿಯ ನಡುವೆ ತಲೆ ಎತ್ತಿನಿಂತಿದೆ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯದ ಕೆಲವು ನೌಕರರ ಭವಿಷ್ಯ ಅತಂತ್ರವಾಗಿದೆ. ಕೆಲಸ ಕೊಡಿ ಎಂದು ಸಂತ್ರಸ್ತರು ಮಾಡುತ್ತಿರುವ ಮನವಿ ಅರಣ್ಯ ರೋಧನವಾಗಿದೆ.

ಇದು ಕುವೆಂಪು ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಗೋಳು. ಹೆಚ್ಚಿನ ಇಳುವರಿ ಕೊಡುವ ಬಾಳೆ ಗಿಡಗಳನ್ನು ಕಡಿಮೆ ವೆಚ್ಚದಲ್ಲಿ ಬೆಳೆಸಿ ರೈತರಿಗೆ ಮಾರಾಟ ಮಾಡುವ ಉತ್ತಮ ಉದ್ದೇಶದಿಂದ ಅಂಗಾಂಶ ಕೃಷಿ ಉತ್ಪಾದನಾ ಕೇಂದ್ರ ತೆರೆಯಲಾಗಿತ್ತು. ಆದರೆ, ಈಗ ಕೇಂದ್ರವನ್ನು ಏಕಾಏಕಿ ಮುಚ್ಚಿದ್ದು, ನೌಕರರು ಅತಂತ್ರರಾಗಿದ್ದಾರೆ.

ಕೆಎಸ್ ಯುಆರ್ ಎಫ್ ಶ್ರೇಣಿಯಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನ

2007ರಲ್ಲಿ ಅಂಗಾಂಶ ಕೃಷಿ ಉತ್ಪಾದನಾ ಕೇಂದ್ರವನ್ನು ಜೈವಿಕ ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ಆರಂಭಿಸಲಾಯಿತು. ಪ್ರೊ. ವಿ. ಕೃಷ್ಣ ಎಂಬುವವರು ಕೇಂದ್ರದ ಉಸ್ತುವಾರಿಯಾಗಿ ನೇಮಕವಾದರು. ಶಿವಮೊಗ್ಗ ನಗರದಲ್ಲಿರುವ ಯೂನಿಕ್ ಸೆಕ್ಯೂರಿಟಿ ಸರ್ವೀಸ್ (ರಿ). ಏಜೆನ್ಸಿಯಿಂದ ಕೇಂದ್ರಕ್ಕೆ 7 ಸಿಬ್ಬಂದಿಗಳನ್ನು ಸೇರಿಸಿಕೊಳ್ಳಲಾಯಿತು.

ಟೆಕ್ನಿಕಲ್ ಅಸ್ಟಿಸ್ಟೆಂಟ್ -1 ಆಗಿ ಶಶಿಕುಮಾರ್, ಟೆಕ್ನಿಕಲ್ ಅಸಿಸ್ಟೆಂಟ್ -2 ಆಗಿ ಅರುಣ್ ಕುಮಾರ್ ಎ., ಮೀಡಿಯಾ ಅಪರೇಟರ್ ಆಗಿ ಇಂದು ಕುಮಾರ್, ಪ್ರೊಡಕ್ಷನ್ ಆಪರೇಟರ್ ನಾರಾಯಣ, ಶೈಲಾ ಬಿ., ಆಶಾಬಾಯಿ ಎಲ್., ಸ್ವಚ್ಛತಾ ಸಿಬ್ಬಂದಿಯಾಗಿ ಗೌರಮ್ಮ ನೇಮಕವಾದರು.

ಕುವೆಂಪು ಅವರ ಶಿಷ್ಯ ಪ್ರೊ. ಪ್ರಭುಶಂಕರ ಇನ್ನಿಲ್ಲ

ಸಂದರ್ಶನ ನಡೆಸಿ, ನಿಯಮಗಳ ಅನ್ವಯವೇ ನೇಮಕಾತಿ ನಡೆಯಿತು. ವಿಶ್ವವಿದ್ಯಾಲಯದ ಅಕ್ಕ-ಪಕ್ಕದ ಊರಿನವರಾದ ಎಲ್ಲಾ ಏಳು ಜನರು ನೌಕರಿ ಸಿಕ್ಕ ಸಂತಸದಲ್ಲಿ ಕೆಲಸ ಆರಂಭಿಸಿದರು. ಆದರೆ, 9 ತಿಂಗಳ ಹಿಂದೆ ಅಂಗಾಂಶ ಕೃಷಿ ಉತ್ಪಾದನಾ ಕೇಂದ್ರ ನಷ್ಟದಲ್ಲಿದೆ ಎಂದು ಅದಕ್ಕೆ ಬೀಗ ಜಡಿಯಲಾಗಿದೆ.

ನೇಮಕಾತಿ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಿದ್ದ ವಿಶ್ವವಿದ್ಯಾಲಯ ಕೇಂದ್ರ ಮುಚ್ಚುವಾಗ ನಿಯಮ ಪಾಲನೆ ಮಾಡಿಲ್ಲ. ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರ ಭವಿಷ್ಯವನ್ನು ನೋಡದೇ, ಅವರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರವನ್ನು ಮುಚ್ಚಿದ್ದಾರೆ.

ಕರ್ನಾಟಕ; ಜಿಲ್ಲಾ ಮತ್ತು ತಾಲೂಕು ಮಟ್ಟದ ಉದ್ಯೋಗ ಮಾಹಿತಿ

ಇದರಿಂದಾಗಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಕೇಂದ್ರ ಮುಚ್ಚಿದ ದಿನದಿಂದ ವಿವಿಯ ಬೇರೆ ವಿಭಾಗದಲ್ಲಿ ಕೆಲಸ ಕೊಡಿ ಎಂದು ಇವರು ಮಾಡುತ್ತಿರುವ ಮನವಿಗೂ ಸ್ಪಂದನೆ ಸಿಕ್ಕಿಲ್ಲ.

ಈ ಕೇಂದ್ರದಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿದ್ದ ಶಶಿ ಕುಮಾರ್ ಅತಿಥಿ ಉಪನ್ಯಾಸಕರಾಗಿ ಬೇರೆ ಕಡೆ ಹೋಗಿದ್ದಾರೆ. ಆದರೆ, ಉಳಿದ 6 ಜನರು ಮಾತ್ರ ಬೇರೆ ಕಡೆ ಕೆಲಸ ಕೊಡಿ ಎಂದು ವಿವಿಯ ರಿಜಿಸ್ಟ್ರಾರ್ ಕಚೇರಿಗೆ ಅಲೆಯುತ್ತಿದ್ದಾರೆ. ಮನವಿಗಳನ್ನು ಕೊಡುತ್ತಿದ್ದಾರೆ.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಚ್ ಆರ್ ಎಂ ಸೆಂಟರ್‌ಗೆ ಇವರಿಗೆ ಕೆಲಸ ಕೊಡಬೇಡಿ ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ, ಕೆಲಸ ಸಿಗುತ್ತಿಲ್ಲ ಎಂಬುದು ಸಂತ್ರಸ್ತ ನೌಕರರ ಆರೋಪವಾಗಿದೆ. ಏಜೆನ್ಸಿ ಬೇರೆ ಕಡೆ ಕೆಲಸ ಕೊಡಲು ವಿಶ್ವವಿದ್ಯಾಲಯದ ಒಪ್ಪಿಗೆ ಬೇಕು. ಆದರೆ, ವಿವಿ ನೌಕರರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದು, ಉದ್ಯೋಗ ಸಿಗದೇ ನೌಕರರು ಆತಂಕಗೊಂಡಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿ, ರಿಜಿಸ್ಟ್ರಾರ್‌ಗೆ ಹಲವು ಬಾರಿ ಮನವಿ ಮಾಡಿದ್ದಾರೆ. ನೋಡೋಣ, ಮಾಡಿಕೊಡುತ್ತೇವೆ, ಬೇರೆಯವರು ಬಿಟ್ಟು ಹೋದಾಗ ಅಲ್ಲಿಗೆ ಹಾಕುತ್ತೇವೆ ಮುಂತಾದ ಉತ್ತರವನ್ನು ಕೊಡುತ್ತಾರೆ ವಿನಃ ಉದ್ಯೋಗ ಕೊಡುತ್ತಿಲ್ಲ.

ವಿಶ್ವವಿದ್ಯಾಲಯದಲ್ಲಿ 50ಕ್ಕೂ ಹೆಚ್ಚು ವಿಭಾಗಗಳಿವೆ. ಬೇರೆ-ಬೇರೆ ವಿಭಾಗಕ್ಕೆ ಹೊರಗಿನಿಂದ 4-5 ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ, ವಿವಿಯ ಆವರಣದಲ್ಲಿನ ವಿಭಾಗದಲ್ಲಿ ಕೆಲಸ ಮಾಡಿದ 6 ನೌಕರರನ್ನು ನೇಮಕ ಮಾಡಿಕೊಳ್ಳುವ ಕುರಿತು ಗಮನ ಹರಿಸುತ್ತಿಲ್ಲ.

ಅಂಗಾಂಶ ಕೃಷಿ ಉತ್ಪಾದನಾ ಕೇಂದ್ರದಲ್ಲಿ ಕೆಲಸ ಮಾಡಿದ ಇಂದು ಕುಮಾರ್ ಹೇಳುವಂತೆ, "ಸೆಕ್ಯುರಿಟಿ ಗಾರ್ಡ್, ಗಾರ್ಡನ್ ಯಾವ ಕೆಲಸ ಕೊಟ್ಟರೂ ಮಾಡುತ್ತೇವೆ. ಕೆಲಸ ನಂಬಿ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದೇವೆ. ನಮಗೆ ಕೆಲಸ ಕೊಡಿಸಿ" ಎಂದು ಮನವಿ ಮಾಡುತ್ತಿದ್ದಾರೆ.

ಬೇಡಿಕೆಗಳು: ಅಂಗಾಂಶ ಕೃಷಿ ಉತ್ಪಾದನಾ ಕೇಂದ್ರದಲ್ಲಿ ಕೆಲಸ ಮಾಡಿದ ನಮಗೆ ಬೇರೆ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶ ನೀಡಿ. ಹೊರಗುತ್ತಿಗೆ ಆಧಾರದಲ್ಲಿ ಹೊರಗಿನವರಿಗೆ ಕೆಲಸ ಕೊಡುವ ಬದಲು ವಿವಿ ಕ್ಯಾಂಪಸ್‌ನಲ್ಲಿಯೇ ಕೆಲಸ ಮಾಡಿದ ನಮಗೆ ಆದ್ಯತೆ ನೀಡಿ ಎಂದು ನೌಕರರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ದೊಡ್ಡವರು ತಮ್ಮ ಪ್ರತಿಷ್ಠೆಗಳನ್ನು ಪಕ್ಕಕ್ಕಿಟ್ಟು ನೌಕರರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.

   
 
ಟೆಕ್ನಾಲಜಿ