Back
Home » Business
ಷೇರುಪೇಟೆ ಚಲನೆ - ಮೂರುದಿನ ಕ್ರೂರಿ ಎರಡು ದಿನ ಉದಾರಿ
Good Returns | 21st Oct, 2019 11:16 AM
 • ಅರವಿಂದೋ ಫಾರ್ಮ

  ಈ ಕಂಪನಿಯ ಷೇರಿನ ಬೆಲೆ ರೂ.476 ರ ಸಮೀಪವಿದೆ. ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.635 ರ ಸಮೀಪದಿಂದ ರೂ.435 ರವರೆಗೂ ಕುಸಿದು ನಂತರ ಪುಟಿದೆದ್ದಿದೆ. ಅಮೆರಿಕಾದ ಎಫ್ ಡಿ ಎ ತನ್ನ ಪರಿಶೀಲನಾ ಕಾರ್ಯದಲ್ಲಿ ಗಮನಿಸಿದ ಕೆಲವು ಅಂಶಗಳು ಹೆಚ್ಚು ನಕಾರಾತ್ಮವಾಗಿವೆ ಎಂಬ ಕಾರಣದಿಂದ ಭಾರಿ ಕುಸಿತ ಕಂಡು ನಂತರ ಚೇತರಿಕೆಯತ್ತ ಸಾಗಿದೆ. ಕಂಪನಿಯ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಬೇಕಿದೆ. ಶುಕ್ರವಾರದಂದು ರೂ.485 ರವರೆಗೂ ಜಿಗಿದು ರೂ.477 ರ ಸಮೀಪ ವಾರಾಂತ್ಯ ಕಂಡಿದೆ.


 • ಸಿಪ್ಲಾ ಲಿಮಿಟೆಡ್

  ಸಿಪ್ಲಾ ಸಹ ಇತ್ತೀಚಿಗೆ ಅಮೆರಿಕಾದ ಎಫ್ ಡಿ ಎ ತನ್ನ ಪರಿಶೀಲನಾ ಕಾರ್ಯದಲ್ಲಿ ಗಮನಿಸಿದ ಕೆಲವು ಅಂಶಗಳು ಹೆಚ್ಚು ಪ್ರಭಾವಿಯಾಗಿವೆ ಎಂಬ ಕಾರಣಕ್ಕಾಗಿ ಹಿಂದಿನ ಶುಕ್ರವಾರ 11 ರಂದು ಷೇರಿನ ಬೆಲೆ ರೂ.388 ರವರೆಗೂ ಕುಸಿದು ನಂತರ ದಿಢೀರ್ ಚೇತರಿಕೆಯಿಂದ ರೂ.442 ರವರೆಗೂ ಅಂದೇ ಚೇತರಿಕೆ ಕಂಡಿತು. ಈ ಕಂಪನಿ ನವೆಂಬರ್ 6 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ. ಇದಕ್ಕೂ ಪುರ್ವಾಬಾವಿಯಾಗಿ ಏರಿಳಿತಗಳನ್ನು ಪ್ರದರ್ಶಿಸಿದಲ್ಲಿ ಅಲ್ಪ ಕಾಲಿನ ಆದಾಯಕ್ಕೆ ಅವಕಾಶವಾಗುತ್ತದೆ.


 • ಗ್ಲೇನ್ ಮಾರ್ಕ್ ಫಾರ್ಮ

  ಅಮೆರಿಕಾದ ಎಫ್ ಡಿ ಎ ತನ್ನ ಪರಿಶೀಲನಾ ಕಾರ್ಯದಲ್ಲಿ ಗಮನಿಸಿದ ಕೆಲವು ಅಂಶಗಳ ಕಾರಣ ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.378 ರ ಸಮೀಪದಿಂದ ರೂ.270 ರ ಸಮೀಪಕ್ಕೆ ಕುಸಿದು ಶುಕ್ರವಾರದಂದು ರೂ.301 ಕ್ಕೆ ತಲುಪಿ ರೂ.299 ರ ಸಮೀಪ ವಾರಾಂತ್ಯ ಕಂಡಿದೆ. ಇದುಸಹ ಅಲ್ಪಕಾಲೀನ ಆದಾಯ ಗಳಿಸಲು ಉತ್ತಮ ಅವಕಾಶ ಕಲ್ಪಿಸಿದಂತಿದೆ.


 • ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್

  ಈ ಕಂಪನಿ ಪ್ರತಿ ತ್ರೈಮಾಸಿಕದಲ್ಲಿ ಪ್ರತಿ ಷೇರಿಗೆ ರೂ.10 ರಂತೆ ಲಾಭಾಂಶ ವಿತರಿಸುವ ಇತಿಹಾಸ ಹೊಂದಿದ್ದು ಉತ್ತಮ ಫಲಿತಾಂಶ ಪ್ರಕಟಿಸುತ್ತಿತ್ತು. ಆದರೆ ಹಿಂದಿನ ತ್ರೈಮಾಸಿಕದಲ್ಲಿ ರೂ.8 ರ ಲಾಭಾಂಶ ವಿತರಿಸಿದೆ. ಇದರೊಂದಿಗೆ ಈ ಮಧ್ಯೆ ವಿವಿಧ ನಕಾರಾತ್ಮಕ ಬೆಳವಣಿಗೆಗಳಿಂದ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.450 ರ ಸಮೀಪದಿಂದ, ಗುರುವಾರ 17 ರಂದು ರೂ.167 ರವರೆಗೂ ದಿನದ ಮಧ್ಯಂತರದಲ್ಲಿ ಕುಸಿದು ನಂತರ ಅಂತಿಮ ಕ್ಷಣಗಳಲ್ಲಿ ರೂ.204 ರವರೆಗೂ ಜಿಗಿತ ಕಂಡು ರೂ.197 ರಲ್ಲಿ ಕೊನೆಗೊಂಡಿತು. ಈ ಷೇರು ವಾರ್ಷಿಕ ಕನಿಷ್ಟಕ್ಕೆ ಕುಸಿದು ನಂತರ ಕಾಣುವ ಚೇತರಿಕೆ ಹಲವು ಬಾರಿ ಪ್ರದರ್ಶಿಸಿದೆ. ಈ ಏರಿಳಿತಗಳ ರಭಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವಿವಿಧ ಸಂಸ್ಥೆಗಳ ರೇಟಿಂಗ್ ಪ್ರಭಾವ. ಅಲ್ಲದೆ ಕಂಪನಿಯು ರೂ.1,330 ಕೋಟಿ ಮೌಲ್ಯದ ' ಮಸಾಲ ಬಾಂಡ್' ಗಳ ಪಕ್ವತೆಯ ಮೊತ್ತವನ್ನು ಬಾಂಡ್ ದಾರರಿಗೆ ಸರಿಯಾದ ಸಮಯದಲ್ಲಿ ಹಿಂದಿರುಗಿಸಿದ ಸುದ್ಧಿಯು ಸಹ ಈ ಏರಿಕೆಗೆ ಪ್ರೇರಕವಾಗಿರಲುಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂತಹ ಆರ್ಥಿಕ ಒತ್ತಡದ ಸಮಯದಲ್ಲೂ ಈ ಕಂಪನಿಯ ಪ್ರವರ್ತಕರು ತಮ್ಮ ಭಾಗಿತ್ವದ ಷೇರುಗಳನ್ನು ಒತ್ತೆ ಇಡುವ ಗೋಜಿಗೆ ಹೋಗಿಲ್ಲ. ನವೆಂಬರ್ ೬ ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಲಾಭಾಂಶ ವಿತರಣೆ ಪರಿಶೀಲಿಸುವ ಕಾರ್ಯಸೂಚಿ ಪ್ರಕಟಸಿದೆ. ವಾರಾಂತ್ಯದಲ್ಲಿ ರೇಟಿಂಗ್ ಸಂಸ್ಥೆ ರೇಟಿಂಗ್ ನ್ನು ಮುಂದುವರೆಸಿದೆ ಎಂಬ ಕಾರಣ ಮತ್ತು ಪೇಟೆಗಳಲ್ಲಿ ಕಂಡು ಬಂದ ಚೇತರಿಕೆಯು ಈ ಷೇರಿನ ಬೆಲೆಯನ್ನು ರೂ.೨೪೫ ರವರೆಗೂ ಏರಿಕೆ ಕಾಣುವಂತೆ ಮಾಡಿ, ರೂ.231 ರ ಸಮೀಪ ವಾರಾಂತ್ಯ ಕಂಡಿದೆ. ಹಿಂದಿನ ದಿನ ರೂ.167 ರ ವಾರ್ಷಿಕ ಕನಿಷ್ಟಕ್ಕೆ ಕುಸಿದು ನಂತರದ ದಿನದಲ್ಲಿ ರೂ.245 ಕ್ಕೆ ಜಿಗಿತ ಕಂಡಿರುವುದು ಪೇಟೆಯ ಚಲನೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.


 • ವಾಟೆಕ್ ವಾಬಾಗ್

  ಜಲ ಸಂಸ್ಕರಣಾ ವಲಯದ ಈ ಕಂಪನಿ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.288 ರಿಂದ ಸತತ ಇಳಿಕೆ ಕಂಡು ಗುರುವಾರ 17 ರಂದು ರೂ.167.35 ರ ವಾರ್ಷಿಕ ಕನಿಷ್ಟಕ್ಕೆ ಕುಸಿದು ನಂತರ ಶುಕ್ರವಾರ ರೂ.200 ರವರೆಗೂ ಜಿಗಿತ ಕಂಡು ರೂ.192 ರ ಸಮೀಪ ಕೊನೆಗೊಂಡಿದೆ. ತನ್ನ ತ್ರೈಮಾಸಿಕ ಫಲಿತಾಂಶದ ದಿನವನ್ನು ಪ್ರಕಟಿಸಿಲ್ಲ. ಆದರೆ ಒಂದು ಬ್ರೋಕಿಂಗ್ ಸಂಸ್ಥೆಯು ಈ ಕಂಪನಿಯು ಗಳಿಸುವ ಲಾಭವು ಹಿಂದಿನ ವರ್ಷಕ್ಕಿಂತ ಸುಮಾರು 67% ರಷ್ಟು ಕುಸಿತಕಾಣುತ್ತದೆ ಎಂಬ ವಿಶ್ಲೇಷಣೆ ಈ ರೀತಿಯ ಷೇರಿನ ಬೆಲೆ ಕುಸಿತಕ್ಕೆ ಕಾರಣವಾಗಿರಬಹುದು.


 • ಪಿ ಎನ್ ಬಿ ಹೌಸಿಂಗ್ ಫೈನಾನ್ಸ್

  ಷೇರುಪೇಟೆಯು ಎಷ್ಟು ವೇಗವಾಗಿ ತನ್ನ ಬಣ್ಣ ಬದಲಾಯಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಈ ಕಂಪನಿಯ ಷೇರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕಂಪನಿಯ ಷೇರಿನ ಬೆಲೆಯು ಒಂದೇ ವಾರದಲ್ಲಿ ರೂ.515 ರ ಸಮೀಪದಿಂದ ರೂ.371 ರವರೆಗೂ ಕುಸಿದು ನಂತರದ ದಿನದಲ್ಲಿ ರೂ.488 ಕ್ಕೆ ಪುಟಿದೆದ್ದಿದೆ. ಈ ರೀತಿಯ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಕಂಪನಿ ಬುಧವಾರದಂದು ರೂ.10 ಸಾವಿರ ಕೋಟಿ ಮೌಲ್ಯದ ನಾನ್ ಕನ್ವರ್ಟಬಲ್ ಬಾಂಡ್ ಗಳ ಮೂಲಕ ಸಂಪನ್ಮೂಲ ಸಂಗ್ರಹಣೆಯನ್ನು ಪ್ರಕಟಿಸಿದ್ದಾಗಿದೆ.
  ಒಂದು ವಿಷಯ ಮಾತ್ರ ಸದಾ ನೆನಪಿನಲ್ಲಿಡಬೇಕಾಗಿದೆ. ಅದೆಂದರೆ ಹೂಡಿಕೆಯ ಹಣ ಸ್ವಲ್ಪಮಟ್ಟಿನ ರಕ್ಷಣೆ ಕಾಣಬೇಕಾದರೆ ಆಯ್ಕೆ ಮಾಡಿಕೊಂಡ ಕಂಪನಿಗಳು ಸಾಧನೆಯಾಧಾರಿತ ಲಾರ್ಜ್ ಕ್ಯಾಪ್ ವಲಯದ್ದಾಗಿರಬೇಕು. ಹೂಡಿಕೆಗೆ ಹೂವಿನಂತ ಅಲ್ಪಾಯು ಕಂಪೆನಿಗಳಿಗಿಂತ ಡ್ರೈ ಫ್ರೂಟ್ ತರಹದ ದೀರ್ಘಾಯು ಲಾರ್ಜ್ ಕ್ಯಾಪ್ ಕಂಪನಿಗಳು ಉತ್ತಮ. ಈ ಅಂಶವನ್ನು ದೃಢಪಡಿಸುವ ಉದಾಹರಣೆ ಎಂದರೆ ಹಿಂದಿನ ತ್ರೈಮಾಸಿಕ ಫಲಿತಾಂಶದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ರೂ.1,420 ನ್ನು ತಲುಪಿದ ನಂತರ ಕಳೆದ ಒಂದು ತಿಂಗಳಲ್ಲಿ ರೂ.1,174 ರಿಂದ ಶುಕ್ರವಾರದಂದು ರೂ.1,428 ಕ್ಕೆ ಮತ್ತೊಮ್ಮೆ ಪುಟಿದೆದ್ದಿದೆ.
ಷೇರುಪೇಟೆಯಲ್ಲಿ ಸುಲಭವಾಗಿ ಹಣ ಸಂಪಾದನೆ ಮಾಡುವ ಅವಕಾಶವನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ 'ಎಕ್ಸ್ ಪ್ರೆಸ್ ವೇ' ನಲ್ಲಿ ಪೇಟೆಗಳು ಚಲನೆ ಪ್ರದರ್ಶಿಸುತ್ತಿವೆ. ಆತಂಕಕಾರಿ ವಾತಾವರಣ ನಿರ್ಮಿಸಿ, ದುರ್ಬಲ ಮನಸ್ಸಿನವರಿಗೆ ಕಿರಿಕಿರಿ ಉಂಟುಮಾಡಿ ನಂತರ ಚೇತರಿಕೆ ಪ್ರದರ್ಶಿತವಾಗುವುದು ಹೆಚ್ಚಿನ ಷೇರುಗಳಲ್ಲಿ ಕಂಡುಬರುತ್ತಿದೆ.

   
 
ಟೆಕ್ನಾಲಜಿ