Back
Home » ಆರೋಗ್ಯ
ನಿಮ್ಮ ಮೆದುಳನ್ನು ಚುರುಕಾಗಿಸಲು ಈ ವಿಚಿತ್ರ ವ್ಯಾಯಾಮಗಳನ್ನು ಟ್ರೈ ಮಾಡಿ ನೋಡಿ
Boldsky | 15th Oct, 2019 10:15 AM
 • ನ್ಯೂರೋಬಿಕ್ ವ್ಯಾಯಾಮ - ಮೆದುಳಿಗೆ ಅಡ್ಡಗತಿಯ ವ್ಯಾಯಾಮ

  ನಮ್ಮ ಪಂಚೇಂದ್ರಿಯಗಳನ್ನು, ಅಂದರೆ ದೃಷ್ಟಿ, ಘ್ರಾಣ, ಸ್ಪರ್ಶ, ರುಚಿ ಮತ್ತು ಶ್ರವಣ ಇವೆಲ್ಲವನ್ನೂ ಒಟ್ಟಾರೆಯಾಗಿ ಬಳಸಲಾಗುವ ಈ ಚಟುವಟಿಕೆಯಿಂದ ಮೆದುಳಿನ ಎಲ್ಲಾ ವಿಭಾಗಗಳಿಗೆ ಸೂಕ್ತ ಸಂವೇದನೆ ದೊರಕುವ ಮೂಲಕ ಮೆದುಳಿನ ಆರೋಗ್ಯ ಉತ್ತಮವಾಗುತ್ತದೆ ಹಾಗೂ ಸ್ಮರಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಈ ಶಕ್ತಿಯನ್ನು ಉದ್ದೀಪನಗೊಳಿಸುವ ಕೆಲವು ಸುಲಭ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಇದನ್ನು ಸಾಧಿಸಬಹುದು. ಮೊದಲಿಗೆ ಇವು ತಮಾಷೆ ಎಂಬಂತೆ ಕಂಡುಬಂದರೂ, ಸುಲಭ ಎಂದೆನಿಸಿದರೂ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಬಳಿಕ ಇದು ಅಷ್ಟು ಸುಲಭವಲ್ಲ ಎಂದು ಅರ್ಥವಾಗುತ್ತದೆ.


 • ನಿಮ್ಮ ಪ್ರಮುಖವಲ್ಲದ ಕೈಯಿಂದ ಹಲ್ಲುಜ್ಜಿ

  ಒಂದು ವೇಳೆ ನೀವು ಬಲಗೈ ಅಭ್ಯಾಸವುಳ್ಳವರಾಗಿದ್ದರೆ ಈ ಕ್ರಮ ಅನುಸರಿಸಿ. ಸ್ಪರ್ಶದಿಂದ ನಿಮ್ಮ ದೃಷ್ಟಿಗೆ ಬೀಳದೇ ಇರುವ ಭಾಗಗಳನ್ನು ಮೆದುಳು ತನ್ನದೇ ಆದ ರೀತಿಯಲ್ಲಿ 'ನೋಡಿ'ಟ್ಟುಕೊಂಡಿರುತ್ತದೆ. ಈ ಭಾಗದಲ್ಲಿ ಬದಲಾವಣೆಯನ್ನು ಮೆದುಳು ಬೇರೆಯಾಗಿ ಗುರುತಿಸುತ್ತದೆ. ಇದನ್ನು ಕಂಡುಕೊಳ್ಳಲು ನಿಮ್ಮ ಪ್ರಮುಖವಲ್ಲದ ಕೈಯಿಂದ ಮಾಡುವ ಕೆಲಸಗಳನ್ನು ಉದಾಹರಣೆಗೆ ಹಲ್ಲುಜ್ಜುವುದು, ಮೊದಲಾದವನ್ನು ಈಗ ಎಡಗೈಯಿಂದ ನಿರ್ವಹಿಸಲು ಯತ್ನಿಸಿ. ಎಷ್ಟು ಕಷ್ಟ ಮತ್ತು ವಿಚಿತ್ರ ಎಂದೆನಿಸುತ್ತದೆ ಅಲ್ಲವೇ? ಅಭ್ಯಾಸವಿಲ್ಲದ ಈ ಕ್ರಮ ಕೊಂಚ ಅಭ್ಯಾಸವಾಗುವವರೆಗೂ ಗಾಯವಾಗದಂತೆ ಜಾಗ್ರತೆ ವಹಿಸಿ. ಕೊಂಚ ಅಭ್ಯಾಸವಾದ ಬಳಿಕ ಇದೇ ಕಾರ್ಯವನ್ನು ಕಣ್ಣು ಮುಚ್ಚಿಕೊಂಡು ನಿರ್ವಹಿಸಿ. ಇದೇ ಪ್ರಕಾರ ಶೇವಿಂಗ್ ಮೊದಲಾದ ಕಾರ್ಯಗಳನ್ನೂ ಪ್ರಯತ್ನಿಸಬಹುದು. (ಗಾಯಗಳ ಬಗ್ಗೆ ಎಚ್ಚರವಿರಲಿ)


 • ಮುಂಜಾನೆಯ ಕಾರ್ಯಕ್ರಮಗಳನ್ನು ಅದಲು ಬದಲಾಗಿಸಿ

  ಅಭ್ಯಾಸವಾಗಿ ಹೋಗಿರುವ ಕಾರ್ಯಗಳಿಗೆ ಮೆದುಳು ಅತಿ ಕಡಿಮೆ ಶ್ರಮವಹಿಸುತ್ತದೆ ಹಾಗೂ ಹೊಸದಾಗಿರುವ ಅಭ್ಯಾಸಕ್ಕೆ ಅತಿ ಹೆಚ್ಚಿನ ಶ್ರಮ ವಹಿಸುತ್ತದೆ. ಕೆಲವು ಚಟುವಟಿಕೆಗಳು ಮೆದುಳಿನ ನಿರ್ದಿಷ್ಟ ಭಾಗಕ್ಕೆ ಅಭ್ಯಾಸವಾಗಿ ಹೋಗಿರುತ್ತದೆ. ಇದನ್ನು ಬೇರೆಯ ಕ್ರಮದಲ್ಲಿ ನಿರ್ವಹಿಸಿದರೆ ಮೆದುಳಿಗೆ ಇದು ಹೊಸದಾಗಿ ಕಲಿಯಬೇಕಾಗುತ್ತದೆ ಹಾಗೂ ಹಿಂದೆ ನಡೆಯದಿದ್ದ ಭಾಗಗಳಲ್ಲಿ ಚಟುವಟಿಕೆ ಪ್ರಾರಂಭವಾಗುತ್ತದೆ. ಇದನ್ನು ಸುಲಭವಾಗಿಸಲು ಮುಂಜಾನೆಯ ಕೆಲವು ಕಾರ್ಯಕ್ರಮಗಳನ್ನು ಹಿಂದು ಮುಂದಾಗಿಸಿ ಅಥವಾ ದಾರಿಯನ್ನು ಬದಲಿಸಿ. ಉದಾಹರಣೆಗೆ ಮೊದಲು ಉಪಾಹಾರ ಮಾಡಿ ಉಡುಪು ಧರಿಸುತ್ತಿದ್ದರೆ ಇದನ್ನು ಹಿಂದುಮುಂದಾಗಿಸಿ, ನಿಮ್ಮ ಅಂಗಡಿಗೆ ಹೋಗುತ್ತಿದ್ದ ದಾರಿಯನ್ನು ಬೇರೆ ದಾರಿಗೆ ಬದಲಿಸಿ ಅಥವಾ ಹಿಂದೆಂದೂ ವೀಕ್ಷಿಸದಿದ್ದ ಟೀವಿ ವಾಹಿನಿಯನ್ನು ವೀಕ್ಷಿಸಲು ತೊಡಗಿ. ಹಿಂದೆಂದೂ ನೋಡದೇ ಇದ್ದ ಮಕ್ಕಳ ಟೀವಿ ವಾಹಿನಿಯೊಂದನ್ನು ನೋಡಲು ಪ್ರಾರಂಭಿಸಿ.


 • ನಿಮಗೆ ಚಿರಪರಿಚಿತವಿರುವ ವಸ್ತುಗಳನ್ನು ತಲೆಕೆಳಗಾಗಿಸಿ, ನಿಜಕ್ಕೂ!

  ಸಾಮಾನ್ಯವಾಗಿ ನಾವು ಬಳಸುವ ವಸ್ತುಗಳೆಲ್ಲಾ ನಮಗೆ ಚಿರಪರಿಚಿತವಾಗಿದ್ದು ಒಂದು ಕ್ಷಣದ ನೋಟದಲ್ಲಿಯೇ ಅದರ ಬಗ್ಗೆ ಎಲ್ಲಾ ಮಾಹಿತಿಗಳು ಮೆದುಳಿನಿಂದ ಹೊರಬಂದುಬಿಡುತ್ತವೆ. ಹಾಗಾಗಿ ಇದೇ ವಸ್ತುಗಳನ್ನು ತಲೆಕೆಳಗಾಗಿಸಿದರೆ ಮೆದುಳು ಇದನ್ನು ಹೊಸದೇ ವಸ್ತುವೆಂದು ಪರಿಗಣಿಸುತ್ತದೆ. ಒಂದು ವೇಳೆ ತಲೆಕೆಳಗಾಗಿಸಲು ಸಾಧ್ಯವಿಲ್ಲದಿದ್ದರೆ ಸ್ಥಾನಪಲ್ಲಟಗೊಳಿಸಿ.


 • ಊಟದ ಮೇಜಿನಲ್ಲಿ ಎಂದೂ ಕುಳಿತುಕೊಳ್ಳುವ ಸ್ಥಾನವನ್ನು ಬದಲಿಸಿ

  ನಾವು ನಿತ್ಯವೂ ಸೇವಿಸುವ ಆಹಾರ ಹಾಗೂ ಕುಳಿತುಕೊಳ್ಳುವ ಸ್ಥಳ ಎಲ್ಲವೂ ನಮ್ಮ ಮೆದುಳಿನಲ್ಲಿ ಸ್ಥಿತಗೊಂಡಿರುತ್ತದೆ. ಇವುಗಳನ್ನು ಬದಲಿಸಿದಾಗಲೂ ಅಥವಾ ಹೊಸದರೊಂದಿಗೆ ಬದಲಿಸಿಕೊಂಡಾಗ ಮೆದುಳು ಇದನ್ನು ಹೊಸದೆಂದು ಪರಿಗಣಿಸುತ್ತದೆ. ನಿಮ್ಮ ಆಹಾರದಲ್ಲಿ ಹೊಸ ಪರಿಮಳವೊಂದನ್ನು ಪ್ರಯತ್ನಿಸಿ, ಲಿಂಬೆ, ವನಿಲ್ಲಾ ಅಥವಾ ಪುದಿನಾ ಮೊದಲಾದವುಗಳನ್ನು ಪ್ರಯತ್ನಿಸಿ. ರಾತ್ರಿ ಮಲಗುವ ಸಮಯದಲ್ಲಿ ಎಂದಿನ ಪರಿಮಳಕ್ಕೆ ಬದಲಾಗಿ ಬೇರೆಯೇ ಪರಿಮಳವನ್ನು ಇರಿಸಿ, ನಿಮಗೆ ಇಷ್ಟವಾಗದಿದ್ದರೂ ಸರಿ, ಒಂದು ವಾರದವರೆಗಾದರೂ ಪ್ರಯತ್ನಿಸಿ. ಈ ಪರಿಮಳವನ್ನು ಬೆಳಿಗ್ಗೆದ್ದಾಗ, ಸ್ನಾನದ ಬಳಿಕ, ಬಟ್ಟೆ ತೊಟ್ಟ ಬಳಿಕ ಹೀಗೆ ವಿವಿಧ ಅವಧಿಗಳಲ್ಲಿ ಆಘ್ರಾಣಿಸಿ ಪ್ರಯತ್ನಿಸಿ.


 • ಕಾರಿನ ಕಿಟಕಿಯನ್ನು ಇಳಿಸಿ

  ನಮ್ಮ ಮೆದುಳಿನಲ್ಲಿರುವ ಹಿಪ್ಪೊಕ್ಯಾಂಪಸ್ ಎಂಬ ಭಾಗ ಪರಿಮಳ, ಸದ್ದು ಹಾಗೂ ದೃಷ್ಟಿಯ ಮಾಹಿತಿಗಳನ್ನು ಬಳಸಿ ಒಂದು ಪಟವನ್ನು ರಚಿಸುವ ಸಾಮರ್ಥ್ಯ ಹೊಂದಿದೆ. ಈ ಭಾಗವನ್ನು ಚುರುಕುಗೊಳಿಸಲು ಹೀಗೆ ಮಾಡಿ: ನಿಮ್ಮ ನಿತ್ಯದ ಪ್ರಯಾಣದ ನಡುವೆ ಎದುರಾಗುವ ಸ್ಥಳಗಳಲ್ಲೆಲ್ಲಾ ನೀವು ಇದುವರೆಗೆ ನೋಡುತ್ತಾ ಬಂದಿದ್ದರೂ ಗಮನಿಸದೇ ಇರುವ ವಾಸನೆ, ಸೂಕ್ಷ್ಮ ವಿವರ ಮೊದಲಾದವುಗಳನ್ನು ಗಮನಿಸತೊಡಗಿ. ಇದಕ್ಕಾಗಿ ಕಾರಿನ ಗಾಜನ್ನು ಇಳಿಸಿ ನಿಸರ್ಗವನ್ನು ನೋಡತೊಡಗಿ.


 • ಸ್ಪರ್ಶದಿಂದ ಕಾಣಲು ಯತ್ನಿಸಿ

  ನಮ್ಮ ಮೆದುಳು ವಸ್ತುಗಳನ್ನು ಗುರುತಿಸಲು ಕಣ್ಣನ್ನೇ ಅತಿ ಹೆಚ್ಚಾಗಿ ನೆಚ್ಚಿಕೊಳ್ಳುತ್ತದೆ. ಆದರೆ ಇದರ ಬಳಿಕ ಬರುವ ಇಂದ್ರಿಯವೆಂದರೆ ಸ್ಪರ್ಶ. ಸ್ಪರ್ಶದಿಂದಲೂ ನಾವು ಮೆದುಳಿನಲ್ಲಿ ಆ ವಸ್ತುವಿನ ರೂಪವನ್ನು ಕಲ್ಪಿಸಿಕೊಳ್ಳಬಹುದು. ಈ ಶಕ್ತಿಯನ್ನೇ ಅಂಧರಿಗಾಗಿ ಬ್ರೈಲ್ ಲಿಪಿಯ ರೂಪದಲ್ಲಿ ಬಳಸಲಾಗಿದೆ. ಹಾಗಾಗಿ ಬ್ರೈಲ್ ಲಿಪಿ ಬಳಸಿ ದೃಷ್ಟಿ ಇಲ್ಲದ ವ್ಯಕ್ತಿಗಳೂ ಸುಲಭವಾಗಿ ಪುಸ್ತಕಗಳನ್ನು ಓದಬಲ್ಲರು. ಈ ಕ್ಷಮತೆಯನ್ನು ಪಡೆಯಲು ನಿಮ್ಮ ಕಾರಿನ ಅಥವಾ ಕೆಲಸದ ಮೇಜಿನ ಕೆಳಭಾಗದಲ್ಲಿ ಕೆಲವು ನಾಣ್ಯಗಳನ್ನಿರಿಸಿ, ಇದನ್ನು ನೋಡದೆಯೇ ಇದು ಯಾವ ನಾಣ್ಯ ಎಂದು ಗುರುತಿಸಲು ಯತ್ನಿಸಿ. ನಡೆದಾಡುವಾಗಲೂ ಕೆಲವು ನಾಣ್ಯಗಳನ್ನು ಜೇಬಿನಲ್ಲಿರಿಸಿ ಇವುಗಳನ್ನು ಬೆರಳಿನ ಸ್ಪರ್ಶದಿಂದ ಗುರುತಿಸಲು ಯತ್ನಿಸಿ.


 • ಹತ್ತು ವಸ್ತುಗಳ ಆಟ

  ಒಂದು ವಸ್ತುವಿಗೆ ಸಂಬಂಧಿಸಿದಂತೆ ಹತ್ತು ವಸ್ತುಗಳನ್ನು ಊಹಿಸಿಕೊಳ್ಳುವುದು ಒಂದು ಆಟವೆಂದು ಪರಿಗಣಿಸುವುದಾದರೆ ಇದೊಂದು ಮೆದುಳಿಗೆ ಉತ್ತಮ ಕಸರತ್ತು ನೀಡುವ ಆಟವಾಗಿದೆ. ನಿತ್ಯವೂ ಕನಿಷ್ಟ ಒಂದು ಬಾರಿಯಾದರೂ ಅನುಸರಿಸುವ ಮೂಲಕ ಮೆದುಳು ಅತ್ಯುತ್ತಮ ಕ್ಷಮತೆ ಪಡೆಯುತ್ತದೆ. ಇದಕ್ಕಾಗಿ ಇನ್ನೊಬ್ಬರಿಂದ ಒಂದು ವಸ್ತುವಿನ ಬಗ್ಗೆ ವಿವರಣೆಯನ್ನು ಕೇಳಿ ಆ ವಸ್ತುವಿಗೆ ಸಂಬಂಧಿಸಿದ ಹತ್ತು ವಸ್ತುಗಳನ್ನು ವಿವರಿಸಬೇಕಾಗಿರುವುದು ಈ ಕಸರತ್ತಿನ ಭಾಗ. ಉದಾಹರಣೆಗೆ ಕೋಲಿನಂತಹ ಹಿಡಿಕೆಯುಳ್ಳ ವಸ್ತು ಎಂದರೆ ನೀವು ಊಹಿಸಬಹುದಾದ ವಸ್ತುಗಳೆಂದರೆ ಟೆನ್ನಿಸ್ ರಾಕೆಟ್, ನೆಲ ಸ್ವಚ್ಛಗೊಳಿಸುವ ಬ್ರಶ್, ಬೇಸ್ ಬಾಲ್ ಬ್ಯಾಟ್, ಕ್ರಿಕೆಟ್ ಬ್ಯಾಟ್, ಹಾರೆ, ಪಿಕ್ಕಾಸಿ, ಒಂದು ಮೈಕ್ರೋಫೋನ್ ಅಥವಾ ದೋಣಿಯ ಹುಟ್ಟು, ಒಟ್ಟಾರೆ ಕೈಯಲ್ಲಿ ಹಿಡಿಯಬಹುದಾದ ವಸ್ತುವಾದರೆ ಸರಿ. ವಿಷಯ ಕ್ಲಿಷ್ಟವಾದಷ್ಟೂ ಮೆದುಳಿಗೆ ಕಸರತ್ತೂ ಹೆಚ್ಚು.


 • ಸುಪರ್ ಮಾರ್ಕೆಟ್ ನಲ್ಲಿರುವ ವಸ್ತುಗಳನ್ನು ಗಮನಿಸಿ

  ಸಾಮಾನ್ಯವಾಗಿ ಅತಿ ಹೆಚ್ಚು ಲಾಭದಾಯಕ ವಸ್ತುಗಳನ್ನು ಕಣ್ಣು ಹಾಯುವ ಮಟ್ಟದಲ್ಲಿರಿಸಿರುವುದು ಗ್ರಾಹಕರನ್ನು ಸೆಳೆಯಲು ಮಾಡುವ ತಂತ್ರವಾಗಿದೆ. ಹಾಗಾಗಿ ಅಷ್ಟೊಂದು ಭರದಲ್ಲಿ ಮಾರಾಟವಾಗದ ವಸ್ತುಗಳನ್ನು ಮೇಲೆ ಮತ್ತು ಅಂಗಡಿಯ ಬಾಗಿಲಿನಿಂದ ಅತಿ ದೂರದಲ್ಲಿರಿಸಿರುತ್ತಾರೆ. ಸಾಮಾನ್ಯವಾಗಿ ಅಗತ್ಯ ಬೀಳದ ಹೊರತು ಅಲ್ಲಿ ಗ್ರಾಹಕನ ಗಮನ ಹೋಗುವುದೇ ಇಲ್ಲ. ನಿಮ್ಮ ಮೆದುಳಿಗೆ ಕಸರತ್ತು ನೀಡಲು ಹೀಗೆ ಮಾಡಿ, ಸಾಮಾನುಗಳಿರುವ ಕಪಾಟಿನ ಬದಿಯಿಂದ ಗಮನಿಸಿ ಮೇಲಿನಿಂದ ಕೆಳಗಿನವರೆಗೆ ದೃಷ್ಟಿ ಹಾಯಿಸಿ. ಇದರಲ್ಲಿ ನೀವು ಹಿಂದೆ ನೋಡದ ವಸ್ತುಗಳನ್ನು ಪಟ್ಟಿ ಮಾಡಿ. ಇವುಗಳಲ್ಲಿ ಕೆಲವನ್ನು ತೆಗೆದುಕೊಂಡು ಇದರಲ್ಲಿ ಅಡಕವಾಗಿರುವ ಸಾಮಾಗ್ರಿಗಳನ್ನು ಪರಾಮರ್ಶಿಸಿ. ಬಳಿಕ ಇದನ್ನು ಸ್ವಸ್ಥಾನದಲ್ಲಿರಿಸಿ. ಈ ವಸ್ತುವನ್ನು ಅಗತ್ಯವಿಲ್ಲದೇ ಕೊಳ್ಳಬೇಕಾಗಿಲ್ಲ. ಆದರೆ ಇದುವರೆಗೆ ನೋಡದೇ ಇದ್ದ ವಸ್ತುವೊಂದರ ಪರಿಚಯ ನಿಮಗಾಗುತ್ತದೆ.


 • ಗುಂಪಿನಲ್ಲಿ ಒಂದು ಕಲೆಯನ್ನು ರಚಿಸಿ

  ಕಲೆ ಶಬ್ಧರಹಿತ ಮತ್ತು ಭಾವನಾತ್ಮಕವಾಗಿದ್ದು ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಎಂಬ ಭಾಗಕ್ಕೆ ಸಂಬಂಧಿಸಿದೆ. ಕಲೆಯನ್ನು ನಿರ್ಮಿಸಿದಾಗ ನಿಮ್ಮ ಮೆದುಳಿಗೆ ಇಷ್ಟವಾಗುವ ವಸ್ತು, ಬಣ್ಣ, ಭಾವಗಳೇ ಇದರಲ್ಲಿ ಮೂಡುತ್ತವೆ. ಅಲ್ಲದೇ ಮೆದುಳು ತರ್ಕಿಸುವ ಹಾಗೂ ತನಗೆ ನೇರವಾಗಿ ಕಂಡುಬಂದ ವಿಷಯಗಳನ್ನೇ ಕಲಾಕೃತಿಯಲ್ಲಿ ಮೂಡಿಸಲು ಪ್ರೇರೇಪಿಸುತ್ತದೆ. ಅಂದರೆ ದಿನದ ಹೆಚ್ಚಿನ ಸಮಯ ಗಮನಿಸುವ ಅಂಶಗಳೇ ಇದರಲ್ಲಿ ತುಂಬಿರುತ್ತವೆ. ಇದಕ್ಕಾಗಿ ಒಂದು ಗುಂಪನ್ನು ರಚಿಸಿ ತಮಗಿಷ್ಟ ಬಂದ ಒಂದು ಚಿತ್ರವನ್ನು ಒಂದು ಸಮಯದ ಮಿತಿಯಲ್ಲಿ ನಿರ್ಮಿಸಲು ಯೋಜಿಸಿ, ಬಳಿಕ ಒಬ್ಬರನ್ನೊಬ್ಬರ ಕೃತಿಗಳನ್ನು ನೋಡಿ, ಮನಸಾರೆ ನಕ್ಕುಬಿಡಿ.


 • ದಿನದ ಅವಧಿಯಲ್ಲಿ ಹೆಚ್ಚು ಹೆಚ್ಚು ಜನರನ್ನು ಭೇಟಿಯಾಗಿ

  ಸಮಾಜದಿಂದ ವಿಮುಖರಾಗುವುದು ಮೆದುಳಿನ ಕ್ಷಮತೆಯನ್ನು ಕುಗ್ಗಿಸುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತುಗೊಳಿಸಿವೆ. ಇದೇ ಕಾರಣಕ್ಕಿರಬಹುದು, ಅತಿ ಹೆಚ್ಚು ಜನಸಂಪರ್ಕವುಳ್ಳ ವ್ಯಕ್ತಿಗಳು ವಯೋವೃದ್ದರಾದರೂ ಉತ್ತಮ ನೆನಪಿನ ಶಕ್ತಿಯನ್ನು ಪಡೆದಿರುತ್ತಾರೆ. ಹಾಗಾಗಿ, ಆದಷ್ಟೂ ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯಿರಿ, ಜನಸಾಮಾನ್ಯರೊಂದಿಗೇ ವ್ಯವಹರಿಸಿ. ಬ್ಯಾಂಕಿನಿಂದ ಹಣ ನೀಡುವ ಬದಲು ನಗದು ರೂಪದಲ್ಲಿ ವ್ಯಕ್ತಿಗಳಿಗೆ ಹಣ ನೀಡಿ ಸೇವೆ ಪಡೆಯಿರಿ.


 • ಭಿನ್ನ ವಿಷಯದ ಪುಸ್ತಕಗಳನ್ನು ಓದಿ

  ಪುಸ್ತಕವನ್ನು ಓದುವುದರಿಂದ ಮೆದುಳಿನ ಪರದೆಯಲ್ಲಿ ನಡೆಯುವ ಚಿತ್ರಣವನ್ನು ಯಾವ ರೀತಿಯಿಂದಲೂ ವರ್ಣಿಸಲು ಸಾಧ್ಯವಿಲ್ಲ. ಹಾಗಾಗಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಹಾಗೂ ಇದುವರೆಗೆ ಓದದೇ ಇದ್ದ ವಿಷಯವನ್ನು ಓದಲು ಪ್ರಾರಂಭಿಸಿ. ಇದಕ್ಕೂ ಉತ್ತಮವೆಂದರೆ, ನಿಮ್ಮ ಸಂಗಾತಿ ಅಥವಾ ಸ್ನೇಹಿತರಿಗೆ ಪುಸ್ತಕದ ಭಾಗವೊಂದನ್ನು ಓದಿ ಹೇಳಿ. ಓದಿ ಹೇಳುವುದು ತುಂಬಾ ನಿಧಾನವಾದ ಕ್ರಿಯೆಯಾದರೂ ನಿಮ್ಮ ಸಂಗಾತಿಯೊಂದಿಗೆ ಕಳೆದ ಈ ಕ್ಷಣಗಳು ಅತ್ಯುತ್ತಮ ಕ್ಷಣಗಳಾಗಿರುತ್ತವೆ.


 • ಪರಿಚಿತವಲ್ಲದ ಆಹಾರ ಸೇವಿಸಿ

  ನಮ್ಮ ನಾಲಿಗೆ ಸುಮಾರು ಹತ್ತು ಲಕ್ಷದಷ್ಟು ಬಗೆಯ ರುಚಿಗಳನ್ನು ಗುರುತಿಸಬಲ್ಲವು. ಆದರೆ ನಾವು ನಮಗೆ ಇಷ್ಟವಾದ ಆಹಾರಗಳನ್ನು ಮಾತ್ರವೇ ಸೇವಿಸುವ ಮೂಲಕ ಈ ಕ್ಷಮತೆಯ ಒಂದು ಶೇಖಡಾವನ್ನೂ ಬಳಸಿರುವುದಿಲ್ಲ. ಹಾಗಾಗಿ ಮೆದುಳಿಗೂ ಈ ಕ್ಷಮತೆಯನ್ನು ಬಳಸಿಕೊಳ್ಳುವ ಪ್ರಮೇಯವೇ ಬಂದಿರುವುದಿಲ್ಲ. ಹೊಸ ರುಚಿ ಮತ್ತು ವಾಸನೆಗಳು ಮೆದುಳನ್ನು ಚುರುಕೆಬ್ಬಿಸುತ್ತವೆ. ಘ್ರಾಣಶಕ್ತಿ ಅತಿ ಹೆಚ್ಚಿರುವ ನಾಯಿಗಳು ಅಪರಿಚಿತರು ಬಂದಾಕ್ಷಣ ಬೊಗಳಲು ಪ್ರಾರಂಭಿಸಲು ಇದೇ ಕಾರಣ. ಇಂದಿನಿಂದ ನೀವು ಇದುವರೆಗೆ ಪ್ರಯತ್ನಿಸದೇ ಇದ್ದ, ಕೇಳಿರದೇ ಇದ್ದ, ಕೇಳಿದ್ದರೂ, ತಿನ್ನಲು ಮನಸ್ಸು ಮಾಡದೇ ಇದ್ದ ಖಾದ್ಯಗಳ ರುಚಿಯನ್ನು ಅನುಭವಿಸಲು ತೊಡಗಿ. ವಿವಿಧ ತರಕಾರಿಗಳು, ಋತುಮಾನಕ್ಕೆ ಅನುಗುಣವಾದ ಖಾದ್ಯಗಳು, ತಿಂಡಿಗಳು, ಸಿದ್ಧ ಆಹಾರಗಳನ್ನು ಪ್ರಯತ್ನಿಸಿ. ನೀವು ಇದುವರೆಗೆ ಕೇಳಿರದೇ ಇದ್ದ ಆಹಾರವನ್ನು ತಯಾರಿಸುವ ಬಗ್ಗೆ ಸಾಮಾಜಿಕ ಜಾಲತಾಣದಿಂದಲೋ ಪರಿಚಿತರಿಂದಲೋ ಕೇಳಿ ತಯಾರಿಸಲು ಅಥವಾ ಕೊಂಡು ತಿನ್ನುವತ್ತ ಚಿತ್ತ ಹರಿಸಿ.
ನಮ್ಮ ಮೆದುಳು ಹರಿತವಾದ ಕತ್ತಿಯಿದ್ದಂತೆ, ಇದಕ್ಕೆ ಆಗಾಗ ಸಾಣೆ ಹಿಡಿಯುತ್ತಲೇ ಇರಬೇಕು. ಇಲ್ಲದಿದ್ದರೆ ಈಗ ನೆನಪಿದ್ದ ಮಾಹಿತಿ ಮರುಘಳಿಗೆಗೆ ಮರೆತು ಹೋಗಿರುತ್ತದೆ. ಸಾಣೆ ಹಿಡಿಯಲು ನೆರವಾಗುವ ಕೆಲವು ಚಟುವಟಿಕೆಗಳಿಂದ ಮೆದುಳು ಚುರುಕಾಗಿರುವುದು ಮಾತ್ರವಲ್ಲ, ಮರೆವಿನ ಶಕ್ತಿ ಕುಂದುವುದನ್ನೂ ಅದಷ್ಟು ತಡವಾಗಿಸಬಹುದು.

   
 
ಟೆಕ್ನಾಲಜಿ