Back
Home » ಸೌಂದರ್ಯ
ಬೊಕ್ಕತಲೆ: ಈ ದುರಭ್ಯಾಸಗಳನ್ನು ಇಂದೇ ನಿಲ್ಲಿಸಿ, ನಿಯಂತ್ರಣಕ್ಕೆ ಈ ತಂತ್ರ ಬಳಸಿ
Boldsky | 11th Oct, 2019 05:10 PM
 • ಬೊಕ್ಕತಲೆ ಕಾರಣವಾಗುವ 5 ಪ್ರಮುಖ ತಪ್ಪುಗಳು

  1) ಪ್ರತಿ ದಿನ ಹೆಚ್ಚಿನವರು ಮಾಡುವ ಮೊದಲ ತಪ್ಪು- ಇತ್ತೀಚಿನ ಬ್ಯುಸಿಯಾಗಿರುವ ಜೀವನದಲ್ಲಿ ಹೆಚ್ಚಿನವರು ಒದ್ದೆ ಕೂದಲನ್ನೇ ಬಾಚಿಕೊಳ್ಳುತ್ತಾರೆ. ಇದು ಅವರಿಗೆ ಕೂದಲುದುರುವಿಕೆ ಮತ್ತು ಕೂದಲು ಒಡೆಯುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲು ಸಂಪೂರ್ಣ ಒಣಗಿದ ನಂತರವೇ ಬಾಚಬೇಕು.

  2) ಎರಡನೇ ತಪ್ಪು- ಅನೇಕ ಮಂದಿಗೆ ಯಾವಾಗಲೂ ಟೊಪ್ಪಿ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದಾಗಿ ಕೂದಲಿಗೆ ಸರಿಯಾದ ಆಮ್ಲಜನಕ ಸರಬರಾಜಾಗದೇ ಕೂದಲು ಕಳೆದುಕೊಳ್ಳುತ್ತಾರೆ ಮತ್ತು ಕೂದಲಿನ ಬೇರುಗಳು ದುರ್ಬಲಗೊಂಡು ಕೂದಲುದುರುವಿಕೆ ಪ್ರಾರಂಭವಾಗುತ್ತದೆ.

  3) ಮೂರನೇ ತಪ್ಪು- ಈಗಿನ ಯುವಜನತೆ ಹೇರ್ ಸ್ಟೈಲ್ ಮಾಡುವುದಕ್ಕಾಗಿ ಕೆಮಿಕಲ್ ನಿಂದ ತುಂಬಿರುವ ಅನೇಕ ಹೇರ್ ಸ್ಟೈಲ್ ಪ್ರಾಡಕ್ಟ್ ಗಳನ್ನು ಬಳಕೆ ಮಾಡುತ್ತಾರೆ. ಇದು ಕೂದಲಿಗೆ ದೊಡ್ಡ ಪ್ರಮಾಣದ ಹಾನಿಯನ್ನು ಮಾಡುತ್ತದೆ. ಈಗಿನ ಹುಡುಗರು ಹೇರ್ ಜೆಲ್ ಬಳಕೆ ಮಾಡುತ್ತಾರೆ. ಇದು ಕೂದಲನ್ನು ದುರ್ಬಲವಾಗಿಸುತ್ತದೆ ಮತ್ತು ಸಂಪೂರ್ಣ ಬೊಕ್ಕತಲೆಯಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ.

  4) ನಾಲ್ಕನೇ ತಪ್ಪು - ಅನೇಕ ಮಂದಿ ಕೂದಲಿಗೆ ಶಾಂಪೂ ಮಾಡಿದ ನಂತರ ಕಂಡೀಷನರ್ ಬಳಸುವುದೇ ಇಲ್ಲ. ಇದು ಕೂದಲಿನ ಬೇರುಗಳನ್ನು ಶಕ್ತಿಹೀನವಾಗಿಸುತ್ತದೆ ಯಾಕೆಂದರೆ ಶಾಂಪೂವಿನಲ್ಲಿ ಅನೇಕ ರೀತಿಯ ಕೆಮಿಕಲ್ ಗಳಿರುತ್ತದೆ. ಹಾಗಾಗಿ ಶಾಂಪೂ ಮಾಡಿದ ನಂತರ ಕಂಡೀಷನರ್ ಬಳಕೆ ಮಾಡುವುದನ್ನು ಮರೆಯಬೇಡಿ.

  5) ಐದನೇ ತಪ್ಪು- ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಪ್ರತಿ ದಿನ ಶಾಂಪೂ ಬಳಸಿ ತಮ್ಮ ಕೂದಲನ್ನು ತೊಳೆಯುತ್ತಾರೆ. ಇದು ಕೂಡ ಕೂದಲು ಕಳೆದುಕೊಳ್ಳಲು ಮತ್ತು ಕೂದಲಿನ ಬೇರು ದುರ್ಬಲವಾಗಿ, ತೆಳುವಾಗಿ ತುಂಡಾಗುವುದಕ್ಕೆ ಕಾರಣವಾಗುತ್ತದೆ. ನಿಮ್ಮ ಈ ತಪ್ಪು ಮುಂದೊಂದು ದಿನ ಬೊಕ್ಕತಲೆ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದು ನೆನಪಿರಲಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರವೇ ಶಾಂಪೂ ಹಾಕಿ ಕೂದಲು ತೊಳೆಯುವ ಅಭ್ಯಾಸವನ್ನು ಇಟ್ಟುಕೊಳ್ಳಿ.


 • ಮಹಿಳೆಯರಿಗೂ ಇದೆ ಬೊಕ್ಕತಲೆ ಸಮಸ್ಯೆ

  ಕೇವಲ ಪುರುಷರು ಮಾತ್ರವಲ್ಲ. ಈ ಹಿಂದಿನ ಮಹಿಳೆಯರಿಗಿಂತಲೂ ಅಧಿಕವಾಗಿ ಇಂದಿನ ಮಹಿಳೆಯರು ತಮ್ಮ ಕೂದಲನ್ನುಕಳೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ಒತ್ತಡದಿಂದ ಕೂಡಿರುವ ಅವರ ಜೀವನಶೈಲಿಯು ಕೂದಲು ಉದುರುವಿಕೆಯ ಪ್ರಮುಖ ಕಾರಣವಾಗಿದೆ. ಒತ್ತಡವು ಅವರ ದೇಹದಲ್ಲಿ ಹೆಚ್ಚು ಆಂಡ್ರೋಜೆನ್ (ಪುರುಷ ಹಾರ್ಮೋನು)ಗಳನ್ನು ಉತ್ಪಾದಿಸುವುದಕ್ಕೆ ಪ್ರೇರಣೆ ನೀಡುತ್ತದೆ ಮತ್ತು ಅದರಿಂದಾಗಿ ಉದುರು ಉದುರುವಿಕೆ ಉಂಟು ಮಾಡುವ ರಾಸಾಯನಿಕ ಡಿಟಿಹೆಚ್ ನ ಸ್ರವಿಸುವಿಕೆಯನ್ನು ಹೆಚ್ಚು ಮಾಡುತ್ತದೆ.

  ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವುದು ಹೇಗೆ?


 • ಚೆನ್ನಾಗಿ ಆಹಾರ ಸೇವಿಸಿ, ಬೆಳವಣಿಗೆಯನ್ನು ಗಮನಿಸಿ

  ಕೂದಲು ಮತ್ತು ಆಹಾರದ ನಡುವಿನ ಸಂಬಂಧವು ಬಹಳ ಸರಳವಾಗಿದೆ. ಕೂದಲು ಕೆರಟಿನ್ ಹೆಸರಿನ ಪ್ರೊಟೀನ್ ನಿಂದ ನಿರ್ಮಿತವಾಗಿರುತ್ತದೆ. ಹಾಗಾಗಿ ನಿಮ್ಮ ಡಯಟ್ ನಲ್ಲಿ ಸರಿಯಾದ ಪ್ರಮಾಣದ ಪ್ರೊಟೀನ್ ನ್ನು ಸೇವನೆಯನ್ನು ಅಳವಡಿಸಿಕೊಳ್ಳಬೇಕು. ಕಡಿಮೆ ಪ್ರೊಟೀನ್ ಇರುವ ಆಹಾರ ಸೇವನೆಯಿಂದಾಗಿ ನಿಮ್ಮ ದೇಹವು ಪ್ರೊಟೀನ್ ನ್ನು ಇತರೆ ಕೆಲಸಕಾರ್ಯಗಳಿಗೆ ಉದಾಹರಣೆಗೆ ಜೀವಕೋಶಗಳ ಪುನರ್ ನಿರ್ಮಾಣ ಇತ್ಯಾದಿಗಳಿಗಾಗಿ ಉಳತಾಯ ಮಾಡುತ್ತದೆ. ಹಾಗಾಗಿ ಕೂದಲು ಕಳೆದುಕೊಳ್ಳಬೇಕಾಗುತ್ತದೆ. ಪಾಲಕ್ ಸೊಪ್ಪು, ಬಾದಾಮಿ, ವಾಲ್ ನಟ್, ಪನ್ನೀರ್ ಮತ್ತು ಹಾಲು ಕೂದಲಿಗೆ ಖುಷಿ ನೀಡುವ ಆಹಾರ ಪದಾರ್ಥಗಳು. ಗ್ರೀನ್ ಟೀ ಕೂಡ ಪರಿಣಾಮಕಾರಿಯಾಗಿರುತ್ತದೆ ಯಾಕೆಂದರೆ ಕೂದಲು ಉದುರುವಿಕೆಗೆ ಕಾರಣವಾಗುವ ಡಿಹೈಡ್ರೋಟೆಸ್ಟೊಸ್ಟೆರಾನ್ ಹಾರ್ಮೋನನ್ನು ಇದು ನಿರ್ಭಂಧಿಸುತ್ತದೆ.


 • ಕೆಮಿಕಲ್ ಗಳಿಂದ ಕೂದಲು ಉದುರುವಿಕೆ

  ಮಹಿಳೆಯರು ಅತಿಯಾಗಿ ಕೂದಲಿನ ಅಲಂಕಾರ ಮಾಡುವುದು ಮತ್ತು ಕೂದಲಿಗಾಗಿ ಕೃತಕ ಬಣ್ಣಗಳನ್ನು ಬಳಕೆ ಮಾಡುವುದು ಕೂಡ ಕೂದಲು ಉದುರುವಿಕೆಯ ಪ್ರಮುಖ ಕಾರಣಗಳಲ್ಲೊಂದು. ಬಿಸಿ ಮತ್ತು ಕೆಮಿಕಲ್ ಗಳು ಕೂದಲನ್ನು ದುರ್ಬಲಗೊಳಿಸಿ ತುಂಡಾಗುವಂತೆ ಮಾಡುತ್ತದೆ.


 • ಗರ್ಭನಿರೋಧಕ ಮಾತ್ರೆಗಳಿಂದ ಬೊಕ್ಕತಲೆ ಸಮಸ್ಯೆ

  ಇದಿಷ್ಟೇ ಅಲ್ಲದೆ ದೀರ್ಘಾವಧಿಯ ಹಾರ್ಮೋನುಗಳ ಅಸಮತೋಲನಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ ಮೌಖಿಕ ಗರ್ಭನಿರೋಧಕಗಳ ಸೇವನೆಯೂ ಹೌದು. ಇದರ ಬಳಕೆಯ ಬಗ್ಗೆ ಪರಿಶೀಲನೆ ಅಗತ್ಯ. ವಾರಕ್ಕೆ ಮೂರು ರಾತ್ರಿಗಳಲ್ಲಾದರೂ ಕೂದಲಿನ ನೆತ್ತಿಯನ್ನು ತೇವಗೊಳಿಸಬೇಕು. ಅದಕ್ಕಾಗಿ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯ ಬಳಕೆ ಸೂಕ್ತವಾದದ್ದು. ರಾತ್ರಿ ಎಣ್ಣೆ ಸವರಿದ ನಂತರ ಮಾರನೆಯ ದಿನ ಬೆಳಿಗ್ಗೆ ಕೂದಲನ್ನು ತೊಳೆಯಬೇಕು. ಪ್ರತಿ ಎಂಟು ವಾರಗಳಿಗೊಮ್ಮೆ ಕೂದಲಿನ ವಿಭಜನೆಯನ್ನು ಅಂದರೆ ಸ್ಪ್ಲಿಟ್ ಎಂಡ್ಸ್ ನ್ನು ಕತ್ತರಿಸಿ ಟ್ರಿಮ್ ಮಾಡಿಕೊಳ್ಳುವುದು ಕೂಡ ಒಳಿತು.


 • ಧೂಮಪಾನವನ್ನು ದೂರಮಾಡಿ

  ಸರ್ವರೋಗದ ಮಾರಕ ಜಂತು ಧೂಮಪಾನ. ನಿಮಗೆ ಈ ಅಭ್ಯಾಸವಿದ್ದಲ್ಲಿ ಖಂಡಿತ ಕೂಡಲೇ ಬಿಟ್ಟುಬಿಡಿ. ನೀವು ಧೂಮಪಾನ ಸೇವನೆಯಲ್ಲಿ ಒಳಗೆ ಎಳೆದುಕೊಳ್ಳುವ ಕಾರ್ಬನ್ ಮೊನಾಕ್ಸೈಡ್ ರಕ್ತದಲ್ಲಿ ಆಮ್ಲಜನಕ ಮತ್ತು ಪ್ರಮುಖ ಪೋಷಕಾಂಶವನ್ನು ಕೂದಲಿನ ಕಿರುಚೀಲಗಳಿಗೆ ಸಾಗಿಸುವ ಪ್ರಕ್ರಿಯೆಯನ್ನು ತಡೆಹಿಡಿಯುತ್ತದೆ. ನಿಕೋಟಿನ್ ರಕ್ತನಾಳವನ್ನು ಸಂಕುಚಿತಗೊಳಿಸುತ್ತದೆ. ತಾಜಾವಾಗಿ ಕೂದಲು ಬೆಳೆಯುವುದನ್ನು ತಡೆಯುತ್ತದೆ.


 • ಮಧ್ಯಪಾನದಿಂದಲೂ ಕೂದಲಿನ ಸಮಸ್ಯೆ

  ಅಪರೂಪಕ್ಕೆ ಮಧ್ಯಪಾನ ಮಾಡುವವರು ಹೇಗೋ ಬಚಾಯಿಸಿಕೊಳ್ಳಬಹುದು ಆದರೆ ದಿನನಿತ್ಯ ಕುಡಿತದ ಚಟವಿರುವವರು ಬೊಕ್ಕತಲೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆಲ್ಕೋಹಾಲ್ ಕಬ್ಬಿಣದ ಪೂರೈಕೆಯನ್ನು ತಡೆಹಿಡಿಯುತ್ತದೆ ಮತ್ತು ಸತುವಿನ ಹೀರಿಕೊಳ್ಳುವಿಕೆಯ ಮೇಲೂ ಕೂಡ ಪ್ರಭಾವ ಬೀರುತ್ತದೆ. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ಅಗತ್ಯ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುವ ಪ್ರಕ್ರಿಯೆಯು ಇದರಿಂದಾಗಿ ತಡೆಯಲ್ಪಡುತ್ತದೆ. ಕೂದಲು ಕೂಡ ನಾಲ್ಕನೇ ಒಂದಂಶದ ನೀರನ್ನು ಹೊಂದಿರುವುದರಿಂದಾಗಿ ಅತಿಯಾದ ಆಲ್ಕೋಹಾಲ್ ಸೇವನೆ ಕೂದಲಿನ ಆರೋಗ್ಯವನ್ನು ಹಾಳುಗೆಡವುತ್ತದೆ.


 • ಒತ್ತಡವು ಹೇಗೆ ಕಾರಣವಾಗುತ್ತದೆ ಗೊತ್ತಾ?

  ಕೂದಲು ಉದುರುವುದಕ್ಕೆ ಒತ್ತಡವು ಪ್ರಮುಖ ಕಾರಣಗಳಲ್ಲೊಂದು. ಕೂದಲಿನ ಕೋಶಕವು ಬೆಳೆಯುವುದಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಧಾನ್ಯಗಳು, ಮೀನು, ಮಾಂಸದಲ್ಲಿ ಕಂಡುಬರುವ ಕೊಯೆನ್ಜೈಮ್ ಕ್ಯೂ10 ನೆತ್ತಿಯ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದರಲ್ಲೂ ಪ್ರಮುಖವಾಗಿ ಇದರ ಕೆಲಸವು ಜೀವಕೋಶಧ ಮೈಕ್ರೋಕಾಂಡ್ರಿಯಾ ಅಥವಾ ಶಕ್ತಿಯ ಕಾರ್ಖಾನೆಯಲ್ಲಿ ಇರುತ್ತದೆ. ಒತ್ತಡವು ಆಕ್ಸಿಡೀಕರಣಕ್ಕೆ ಕಾರಣವಾಗುತ್ತದೆ ಮತ್ತು ಈ ಕೊಯೆನ್ಜೈಮ್ ಕ್ಯೂ10 ಗೆ ಹಾನಿ ಮಾಡುತ್ತದೆ. ಅದೇ ಕಾರಣಕ್ಕೆ ಕೂದಲು ಉದುರುವಿಕೆ ಅಧಿಕವಾಗುತ್ತದೆ.


 • ಬೊಕ್ಕತಲೆ ತಡೆಯುವುದಕ್ಕಾಗಿ ಆಹಾರದಲ್ಲಿ ಈ ಕೆಳಗಿನ ಅಂಶಗಳು ಇರುವಂತೆ ನೋಡಿಕೊಳ್ಳಿ

  ವಿಟಮಿನ್ ಬಿ3, ಬಿ5, ಬಿ9 ಮತ್ತು ಇ (ಕಿತ್ತಳೆ, ಪಾಲಕ್, ಚಿಕನ್, ಮೀನು, ಬ್ರುಕೋಲಿ ಮತ್ತು ಸೋಯಾ ಕಾಳುಗಳಲ್ಲಿ ಲಭ್ಯ)

  ಸತು- ಗೋಧಿ, ಡೈರಿ ವಸ್ತುಗಳು, ಓಟ್ಸ್ ಮತ್ತು ಮೊಟ್ಟೆಯ ಹಳದಿ ಭಾಗದಲ್ಲಿ ಸಿಗುತ್ತದೆ

  ಮೆಗ್ನೀಷಿಯಂ - ಹಾಲು, ಟ್ಯೂನಾ, ಬಾಳೆಹಣ್ಣು, ಗೇರುಬೀಜದಲ್ಲಿ ಲಭ್ಯ

  ಕಬ್ಬಿಣಾಂಶ - ಮೀನು, ಹಸಿರು ಎಲೆಗಳು, ಬಲವರ್ಧಿತ ಸಿರಿಧಾನ್ಯಗಳು ಮತ್ತು ಬೀನ್ಸ್ ನಲ್ಲಿ ಸಿಗುತ್ತದೆ


 • ಬಿಸಿ ಎಣ್ಣೆ ಬಳಸಿ ನಿಮ್ಮ ಕೂದಲಿಗೆ ಮಸಾಜ್ ಮಾಡಿಕೊಳ್ಳಿ

  ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ (ನಾವು ಕೊಬ್ಬರಿ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡುತ್ತೇವೆ) ಮತ್ತು ನಿಧಾನವಾಗಿ ನಿಮ್ಮ ನೆತ್ತಿಯನ್ನು ಬೆರಳಿನ ತುದಿಗಳಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಕೂದಲಿನ ಕಿರುಚೀಲಗಳಲ್ಲಿ ರಕ್ತದ ಹರಿವು ಅಧಿಕವಾಗುತ್ತದೆ. ಆ ಮೂಲಕ ನಿಮ್ಮ ಕೂದಲಿನ ಬೇರಿನ ಶಕ್ತಿಯನ್ನು ಅಧಿಕಗೊಳಿಸುತ್ತದೆ ಮತ್ತು ನಿಮ್ಮ ನೆತ್ತಿಯ ಸ್ಥಿತಿಯು ಅತ್ಯುತ್ತಮವಾಗುತ್ತದೆ.
ನಿಮ್ಮ ಕೂದಲು ದಿನದಿಂದ ದಿನಕ್ಕೆ ಉದುರುತ್ತಿದೆಯಾ? ಬೊಕ್ಕತಲೆಯಿಂದಾಗಿ ಹೆಣ್ಣು ಸಿಗದೆ ಪರದಾಡೋ ಪರಿಸ್ಥಿತಿಯಲ್ಲಿದ್ದೀರಾ? ನಿಮ್ಮ ಜೀವನ ಒಂದು ಮೊಟ್ಟೆಯ ಕಥೆ ಸಿನೆಮಾ ತರಹ ಆಗ್ಹೋಗಿದೆಯಾ? ಹಾಗಾದ್ರೆ ಈ ಲೇಖನವನ್ನು ನೀವು ಒಮ್ಮೆ ಸಂಪೂರ್ಣ ಓದಲೇಬೇಕು.

ಹೌದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲು ಕಳೆದುಕೊಳ್ಳುವ ಸಮಸ್ಯೆಗಾಗಿ ಯುವಕರು ಹೆಚ್ಚು ಚಿಂತೆಗೀಡಾಗಿದ್ದಾರೆ. ಕೂದಲುದುರುವಿಕೆಯು ಬೊಕ್ಕತಲೆ ಸಮಸ್ಯೆಯನ್ನು ಮಾಡಿ ವ್ಯಕ್ತಿಯ ಸೌಂದರ್ಯಕ್ಕೆ ಕುತ್ತು ತಂದು ಬಿಡುತ್ತದೆ. ಕೆಟ್ಟ ಆಹಾರ ಸೇವನೆ, ಕೆಟ್ಟ ಜೀವನಶೈಲಿ ಮತ್ತು ನಿತ್ಯಜೀವನದಲ್ಲಿರುವ ಕೆಲವು ಕೆಟ್ಟ ಚಟಗಳಿಂದಾಗಿ ಹೆಚ್ಚಿನವರು ತಮ್ಮ ಕೂದಲನ್ನು ಎಳೆವಯಸ್ಸಿನಲ್ಲೇ ಕಳೆದುಕೊಳ್ಳುವುದಕ್ಕೆ ಅಥವಾ ವಯಸ್ಸಲ್ಲದ ವಯಸ್ಸಲ್ಲಿ ಕೂದಲು ಬಿಳಿಯಾಗುವಿಕೆಯ ಸಮಸ್ಯೆಯನ್ನು ಎದುರಿಸುವುದಕ್ಕೆ ಕಾರಣವಾಗಿದೆ.

ಕೂದಲುದುರುವಿಕೆಗೆ ಕಾರಣವಾಗಿರುವ ಕೆಟ್ಟ ಅಭ್ಯಾಸಗಳು ನಿಮಗೂ ಕೂಡ ಇರಬಹುದು. ಬೊಕ್ಕತಲೆಗೆ ಕಾರಣವಾಗುವ ಪ್ರಮುಖ 5 ತಪ್ಪುಗಳನ್ನು ನಾವು ನಿಮಗೆ ಇವತ್ತು ಹೇಳಲು ಹೊರಟಿದ್ದೇವೆ.

 
ಟೆಕ್ನಾಲಜಿ