Back
Home » ಸುದ್ದಿ
ಉನ್ನಾವೊ ಅತ್ಯಾಚಾರ ಪ್ರಕರಣ: ವಿಚಾರಣೆಗೆ ಆಸ್ಪತ್ರೆಯಲ್ಲೇ ನ್ಯಾಯಾಲಯ
Oneindia | 11th Sep, 2019 02:20 PM

ನವದೆಹಲಿ, ಸೆಪ್ಟೆಂಬರ್ 11: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಧೀಶರು ಏಮ್ಸ್‌ ಆಸ್ಪತ್ರೆಗೆ ಆಗಮಿಸಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿಯೇ ತಾತ್ಕಾಲಿಕ ನ್ಯಾಯಾಲಯ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ.

ಆತ್ಯಾಚಾರ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಗರ್ ನನ್ನೂ ಸಹ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಕೊಠಡಿಯ ಒಳಗೆ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯಲಿದೆ. ಈ ಸಮಯ ಸಿಸಿಟಿವಿ ಸಹ ಆಫ್ ಮಾಡುವಂತೆ ಆಸ್ಪತ್ರೆಗೆ ಸೂಚಿಸಲಾಗಿದೆ.

ಉನ್ನಾವೋ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್ ಮಹತ್ವದ ಆದೇಶ

ಜುಲೈ ತಿಂಗಳಿಂದಲೂ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ಕಾರು ಅಪಘಾತವಾಗಿತ್ತು. ಆ ಕಾರು ಅಪಘಾತವನ್ನು ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಗರ್ ಮಾಡಿಸಿದ್ದಾನೆ ಎಂಬ ಗುಮಾನಿ ಇದೆ. ಆ ಅಪಘಾತದಲ್ಲಿ ಸಂತ್ರಸ್ತೆಯ ಇಬ್ಬರು ಸಂಬಂಧಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಸಂತ್ರಸ್ತೆಯು ಚಿಂತಾಜನಕ ಸ್ಥಿತಿಯಲ್ಲಿರುವ ಕಾರಣ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಧೀಶರೇ ಆಸ್ಪತ್ರೆಗೆ ತೆರಳುವಂತೆ ಹೈಕೋರ್ಟ್‌ ಕಳೆದ ವಾರ ಸೂಚನೆ ನೀಡಿತ್ತು. ಅದರಂತೆಯೇ ಇಂದು ನ್ಯಾಯಾಧೀಶರು, ವಕೀಲರು, ಆರೋಪಿ ಎಲ್ಲರೂ ಏಮ್ಸ್‌ ಆಸ್ಪತ್ರೆಗೆ ತೆರಳಿ ಅಪಘಾತದಿಂದಾಗಿ ಹಾಸಿಗೆಯ ಮೇಲಿರುವ ಸಂತ್ರಸ್ತೆಯ ಹೇಳಿಕೆ ಪಡೆಯಲಿದ್ದಾರೆ ಮತ್ತು ಅಲ್ಲಿಯೇ ವಿಚಾರಣೆಯೂ ನಡೆಯಲಿದೆ.

ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...

ಸ್ಟ್ರೆಚರ್ ಅಥವಾ ಟ್ರಾಲಿಯಲ್ಲಿ ಸಂತ್ರಸ್ತೆಯನ್ನು ಕರೆದುಕೊಂಡು ಬಂದು, ನ್ಯಾಯಾಧೀಶರಿಗೆ ಹತ್ತಿರ ಆಕೆಯನ್ನು ಸ್ಥಿತಗೊಳಿಸಿ ಹೇಳಿಕೆ ಪಡೆಯಲಾಗುತ್ತದೆ. ಈ ಸಮಯದಲ್ಲಿ ಆಕೆಯೊಂದಿಗೆ ಅನುಭವಿ ಶುಶ್ರೂಕಿಯೊಬ್ಬರು ಮಾತ್ರವೇ ಇರಲಿದ್ದಾರೆ.

ಉನ್ನಾವೋ ರೇಪ್: 11 ನೇ ತರಗತಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಪೊಲೀಸರು ಗಪ್ ಚುಪ್!

ಜುಲೈ 28 ರಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರು ತೆರಳುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಕಾರಿಗೆ ಗುದ್ದಿದ್ದ ಲಾರಿಗೆ ನಂಬರ್ ಪ್ಲೇಟ್ ಅನ್ನು ತೆಗೆಯಲಾಗಿತ್ತು. ಇದು ಅನುಮಾನಗಳಿಗೆ ಕಾರಣವಾಗಿದ್ದು, ಸಿಬಿಐ ಇದರ ಬಗ್ಗೆ ತನಿಖೆ ನಡೆಸುತ್ತಿದೆ.

ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ಗೆ ನೀಡಿರುವ ಸುಪ್ರೀಂಕೋರ್ಟ್‌, ಒಬ್ಬ ನ್ಯಾಯಾಧೀಶರನ್ನು ನೇಮಿಸಿ ಪ್ರತಿದಿನ ವಿಚಾರಣೆ ನಡೆಸಿ 45 ದಿನಗಳ ಒಳಗಾಗಿ ತೀರ್ಪು ನೀಡುವಂತೆ ಕೋರಿದೆ. ಅಷ್ಟೆ ಅಲ್ಲದೆ, ಘಟನೆ ನಂತರ ಸಂತ್ರಸ್ತೆ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಭದ್ರತೆ ಒದಗಿಸುವಂತೆಯೂ ಸೂಚಿಸಲಾಗಿದೆ.

   
 
ಟೆಕ್ನಾಲಜಿ