Back
Home » ಸುದ್ದಿ
ಜೈಪುರದಲ್ಲಿ ಕೋಮುಗಲಭೆ: ಅಂತರ್ಜಾಲ ಸೇವೆ ಸ್ಥಗಿತ
Oneindia | 13th Aug, 2019 10:59 PM

ಜೈಪುರ, ಆಗಸ್ಟ್ 13: ರಾಜಸ್ಥಾನದ ಜೈಪುರದಲ್ಲಿ ವದಂತಿಯೊಂದನ್ನು ನಂಬಿದ ಎರಡು ವಿಭಿನ್ನ ಸಮುದಾಯಗಳ ಜನರು ಪರಸ್ಪರ ಕಲ್ಲು ತೂರಾಟ ನಡೆಸಿ ಉಂಟಾದ ಸಂಘರ್ಷದಲ್ಲಿ ಒಂಬತ್ತು ಪೊಲೀಸರು ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ. ದೊಡ್ಡ ಸಂಘರ್ಷಕ್ಕೆ ತಿರುಗುತ್ತಿದ್ದ ಹೊಡೆದಾಟವನ್ನು ನಿಯಂತ್ರಿಸಲು ಪೊಲೀಸರು ಗುಂಪುಗಳನ್ನು ಚೆದುರಿಸುವ ಸಲುವಾಗಿ ಅಶ್ರುವಾಯು ಪ್ರಯೋಗ ಮಾಡಿದರು.

ನಗರದಲ್ಲಿ ಕೋಮು ಉದ್ವಿಗ್ನ ಉಂಟಾಗಿರುವುದರಿಂದ ಹತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯವರೆಗೂ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾರ್ಕಿಂಗ್ ಗಲಾಟೆಯಿಂದ ಕೋಮು ಗಲಾಟೆಯತ್ತ ರಾಷ್ಟ್ರ ರಾಜಧಾನಿ

ಕರ್ತವ್ಯದಲ್ಲಿದ್ದ ಸಾರ್ವಜನಿಕ ಅಧಿಕಾರಿಗಳಿಗೆ ಅಡ್ಡಿಪಡಿಸಿದ, ರಾಷ್ಟ್ರೀಯ ಹೆದ್ದಾರಿಗಳಿಗೆ ತಡೆಯೊಡ್ಡಿದ ಮತ್ತು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಪಾಲ್ ಲಂಬಾ ಹೇಳಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಜನರ ಗುಂಪೊಂದು ಸೋಮವಾರ ರಾತ್ರಿ ಗಲ್ಟಾ ಗೇಟ್ ಸಮೀಪದ ಈದ್ಗಾದ ಮುಂಭಾಗ ದೆಹಲಿ ಹೆದ್ದಾರಿಯನ್ನು ಅಡ್ಡಗಟ್ಟಿ ಹರಿದ್ವಾರಕ್ಕೆ ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಕೆಲವು ಪ್ರಯಾಣಿಕರು ಗಾಯಗೊಂಡಿದ್ದರು. ಇದೇ ಹಿಂಸಾಚಾರ ಭುಗಿಲೇಳಲು ಕಾರಣವಾಗಿತ್ತು.

ಪೊಲೀಸರು ಸ್ಥಳಕ್ಕೆ ತೆರಳುವ ವೇಳೆ ಎರಡೂ ಸಮುದಾಯಗಳ ಜನರ ಗುಂಪು ಪರಸ್ಪರ ಕೈಕೈ ಮಿಲಾಯಿಸುತ್ತಿದ್ದರು. ಪೊಲೀಸರ ಮೇಲೆಯೂ ದಾಳಿ ನಡೆಯಿತು. ಕನಿಷ್ಠ ಐದು ಕಾರುಗಳ ಕಿಟಕಿ ಗಾಜುಗಳನ್ನು ಪುಡಿ ಮಾಡಲಾಯಿತು.

ಗಲ್ಟಾ ಗೇಟ್ ಬಳಿ ಅಲ್ಪಸಂಖ್ಯಾತ ಸಮುದಾಯದ ಕೆಲವರು ಶಿವ ಭಕ್ತೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬ ಸುದ್ದಿ ಹರಡಿತ್ತು. ಇದರಿಂದ ಬಹುಸಂಖ್ಯಾತ ಸಮುದಾಯದ ಜನರು ಕೆರಳಿದ್ದರು. ಇದರಿಂದ ಭಾನುವಾರ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೈ ಶ್ರೀರಾಂ' ಎಂಬ ಘೋಷಣೆ ಕೂಗುವಂತೆ ಜನರನ್ನು ಬಲವಂತ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ಮೂವರು ಕಿಡಿಗೇಡಿಗಳನ್ನು ಸಹ ಗುರುತಿಸಲಾಗಿದೆ. ಅಂತಹ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

   
 
ಟೆಕ್ನಾಲಜಿ